ಮಡಿಕೇರಿ, ಏ. 1: ಕೊಡಗು ಕ್ರೀಡಾ ಕ್ಷೇತ್ರದ ಭೀಷ್ಮ ಎಂದೇ ಖ್ಯಾತನಾಮರಾಗಿದ್ದ ದಿ. ಸಿ.ವಿ. ಶಂಕರ್ (ಶಂಕರ್‍ಸ್ವಾಮಿ) ಅವರ ಜನ್ಮದಿನಾಚರಣೆ ಹಾಗೂ ಉಚಿತ ಹಾಕಿ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಇಂದು ನಡೆಯಿತು.

ವಾಂಡರರ್ಸ್ ಸ್ಪೋಟ್ಸ್ ಕ್ಲಬ್ ಮತ್ತು ಮ್ಯಾನ್ಸ್ ಹಾಕಿ ಅಕಾಡೆಮಿ ಸಹಯೋಗದಲ್ಲಿ ಏರ್ಪಡಿಸಲಾಗಿರುವ 24ನೇ ವರ್ಷದ ಉಚಿತ ಹಾಕಿ ಬೇಸಿಗೆ ಶಿಬಿರದ ಉದ್ಘಾಟನೆಯೊಂದಿಗೆ ಶಂಕರ್‍ಸ್ವಾಮಿ ಅವರ ಜನ್ಮದಿನಾಚರಣೆ ಯನ್ನು ಜಿಲ್ಲಾ ಕ್ರೀಡಾಂಗಣದಲ್ಲಿಂದು ಆಚರಿಸಲಾಯಿತು.

ಅಂತರ್ರಾಷ್ಟ್ರೀಯ ಹಾಕಿ ಆಟಗಾರ ಮಂಡೇಪಂಡ ಸುಬ್ಬಯ್ಯ ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಂಕರ್‍ಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಮೊಣ್ಣಪ್ಪ ಹಾಗೂ ರಾಷ್ಟ್ರೀಯ ಹಾಕಿ ಆಟಗಾರ ಬಲ್ಯಾಟಂಡ ಪಾರ್ಥ ಚಂಗಪ್ಪ ಅವರುಗಳು ಹಾಕಿ ಪಟುಗಳು ಗುರು ಹಿರಿಯರ ಆಶೀರ್ವಾದ, ಮಾರ್ಗದರ್ಶನದೊಂದಿಗೆ ಶಿಸ್ತು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹಾಕಿ ಆಟಗಾರ ಕೋಟೇರ ಮುದ್ದಯ್ಯ, ಶಂಕರ್‍ಸ್ವಾಮಿ ಅವರ ಪುತ್ರ ಗುರುದತ್, ಅಥ್ಲೆಟ್ ಎಡಿಕೇರಿ ವಿಶಾಲಾಕ್ಷಿ, ಮಹಮ್ಮದ್ ಆಸೀಫ್, ತರಬೇತುದಾರರಾದ ಲಕ್ಷ್ಮಣ್ ಸಿಂಗ್, ಶ್ಯಾಂ, ಅಯ್ಯಪ್ಪ, ಗಣೇಶ್, ಚಿತ್ರಕಲಾ ಶಿಕ್ಷಕಿ ಪ್ರಮೀಳ, ಶಕ್ತಿ ಉಪ ಸಂಪಾದಕ ಕುಡೆಕಲ್ ಸಂತೋಷ್, ಶಿಬಿರಾರ್ಥಿಗಳು, ಪೋಷಕರು ಇದ್ದರು.

ಯೋಗ ಶಿಕ್ಷಕ ವೆಂಕಟೇಶ್ ಸ್ವಾಗತಿಸಿ, ನಿರೂಪಿಸಿದರೆ, ಶಿಬಿರಾರ್ಥಿ ಸೃಷ್ಟಿ ಹಾಗೂ ತಂಡದವರು ಪ್ರಾರ್ಥಿಸಿದರು. ಇದೇ ಸಂದರ್ಭ ಇತ್ತೀಚೆಗೆ ನಿಧನರಾದ ಕೂತಂಡ ಗಣಪತಿ ಹಾಗೂ ರಾಜಾರಾಂ ಅವರುಗಳ ಆತ್ಮಕ್ಕೆ ಸಂತಾಪ ಸೂಚಿಸಲಾಯಿತು.