ಸೋಮವಾರಪೇಟೆ, ಏ.1: ನಗರಳ್ಳಿ ಸುಗ್ಗಿ ಎಂದೇ ಮನೆ ಮಾತಾಗಿರುವ ಕೂತಿ ನಾಡು ಸಬ್ಬಮ್ಮ ದೇವಿ (ಲಕ್ಷ್ಮೀ ದೇವಿ)ಯ ಸುಗ್ಗಿ ಉತ್ಸವಕ್ಕೆ ಚಾಲನೆ ದೊರೆತಿದ್ದು, ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವಂತೆ ದೇವಿಯ ತವರೂರೆಂದೇ ಕರೆಯಲ್ಪಡುವ ಕೂತಿ ಗ್ರಾಮದ ಚಾವಡಿಕಟ್ಟೆಯಲ್ಲಿ ವಿಶೇಷ ಪೂಜೆ ನಡೆಯಿತು.

ಕೂತಿ ಗ್ರಾಮದ ಚಾವಡಿಕಟ್ಟೆಯಲ್ಲಿ ಗ್ರಾಮದಲ್ಲಿರುವ ಕೋವಿಗಳನ್ನು ತಂದಿಟ್ಟು ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಕಟ್ಟೆಗೆ ಪ್ರದಕ್ಷಿಣೆ ಬಂದು ಬಂದೂಕಿನಿಂದ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ವಿಧಿವಿಧಾನ ನೆರವೇರಿಸಲಾಯಿತು.

ಪ್ರಮುಖ ಸುಗ್ಗಿ ಹಬ್ಬದಾಚರಣೆ ತಾ. 9ರಂದು ನಗರಳ್ಳಿ ಗ್ರಾಮದ ಸುಗ್ಗಿಕಟ್ಟೆ ಹಾಗೂ 12ರಂದು ದೇವರ ಬನದಲ್ಲಿ ನಡೆಯಲಿದೆ. ಈ ಆಚರಣೆಯಲ್ಲಿ ಕೂತಿ ನಾಡು ವ್ಯಾಪ್ತಿಗೆ ಒಳಪಡುವ ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೇಕನಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಳ್ಳಿ, ಬೀಕಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ ಹಾಗೂ ಸಕಲೇಶಪುರ ತಾಲೂಕಿನ ಓಡಳ್ಳಿ ಗ್ರಾಮದ ಎಲ್ಲಾ ವರ್ಗದ ಜನರೂ ವಿವಿಧ ಕಟ್ಟುಪಾಡುಗಳನ್ನು ಆಚರಿಸುವ ಮೂಲಕ ಸುಗ್ಗಿಯ ವೈಶಿಷ್ಟ್ಯವನ್ನು ಉಳಿಸಿಕೊಂಡು ಬರಲಾಗುತ್ತಿದೆ.

ಸುಗ್ಗಿ ಆಚರಣೆಯಲ್ಲಿ 12 ದೇವರ ಬನ/ರಂಗಗಳಿದ್ದು, ಸುಗ್ಗಿಯ ಕೊನೆಯ ಮೂರು ರಂಗಗಳಾದ ಕಂಬತಳೆ ರಂಗ, ಸುಗ್ಗಿ ರಂಗ, ಬಿಲ್ಲೆರಂಗ ಎಂಬಲ್ಲಿ ಸುಗ್ಗಿಯ ವಿಶೇಷತೆಯನ್ನು ಸಾರುವ ಆಚರಣೆಗಳು ನಡೆಯುತ್ತವೆ. ಪ್ರತಿ ವರ್ಷದ ಸುಗ್ಗಿಯಲ್ಲಿ 9 ಮಂದಿ ದೇವರೊಡೆಯರನ್ನು ನೇಮಿಸಲಾಗುತ್ತದೆ. ಇವರುಗಳು ಸುಗ್ಗಿ ಪ್ರಾರಂಭದಿಂದ ಹಿಡಿದು ಮುಕ್ತಾಯದವರೆಗೂ ವಿಶೇಷ ಮಡಿವಂತಿಕೆಯಿಂದ ದೇವರ ಕಾರ್ಯಗಳನ್ನು ನಡೆಸುತ್ತಾರೆ.

ನಗರಳ್ಳಿ ಸುಗ್ಗಿಗೆ ಸಬ್ಬಮ್ಮ ದೇವರ ಸಮಿತಿ ಅಧ್ಯಕ್ಷ ಕೆ.ಟಿ. ಜೋಯಪ್ಪ, ಕೂತಿ ಗ್ರಾಮಾಧ್ಯಕ್ಷ ಪರಮೇಶ್, ಅರ್ಚಕ ಅನಂತ್‍ರಾಮ್, ಪ್ರಮುಖ ಕೆ.ಟಿ. ಪರಮೇಶ್ ಸೇರಿದಂತೆ ಇತರರು ಚಾಲನೆ ನೀಡಿದರು. ಗ್ರಾಮಸ್ಥರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.