ಗೋಣಿಕೊಪ್ಪ ವರದಿ, ಏ. 2 : ಯರವ ಸಮಾಜದ ವತಿಯಿಂದ ನಡೆಯಲಿರುವ 7 ನೇ ವರ್ಷದ ಕ್ರೀಡಾಕೂಟವನ್ನು ತಿತಿಮತಿ ಪ್ರೌಢಶಾಲಾ ಮೈದಾನದಲ್ಲಿ ತಾ. 19 ರಿಂದ 22 ರವರೆಗೆ ಆಯೋಜಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಸಂಜೀವ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜನಾಂಗದ ಪುರುಷರಿಗೆ ಕಾಳಕೊಟ್ಲತ್ಲೇರಂಡ ಕ್ರಿಕೆಟ್ ಕಪ್ - 2018 ಹಾಗೂ ಮಹಿಳೆಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಗ್ಗ ಜಗ್ಗಾಟ ಏರ್ಪಡಿಸಲಾಗಿದೆ. ಉತ್ತಮ ಸೇವೆ ಸಲ್ಲಿಸಿರುವ ಜನಾಂಗದ ಸಾಧಕರನ್ನು ಗುರುತಿಸಿ ಸನ್ಮಾನಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಜನಾಂಗದ ಸದಸ್ಯರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕ್ರೀಡಾಕೂಟ ವನ್ನು ಆಯೋಜಿಸಲಾಗಿದೆ. ಚದುರಿಹೋಗಿರುವ ಯರವ ಮನೆತನಗಳನ್ನು ಒಂದೇ ವೇದಿಕೆಯಲ್ಲಿ ತರಲು ಕ್ರೀಡಾಕೂಟ ಸಹಕಾರಿ ಯಾಗಲಿದೆ. ಮೊದಲ ವರ್ಷದ ಕ್ರೀಡಾಕೂಟದಲ್ಲಿ 20 ಮನೆತನಗಳು ಭಾಗಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿತ್ತು. ಪ್ರಸ್ತುತ ಸಾಲಿನಲ್ಲಿ 60 ಮನೆತನಗಳು ಪಾಲ್ಗೊಳ್ಳಲಿವೆ ಎಂದು ಹೇಳಿದರು.

ಸಂಚಾಲಕ ಸಿದ್ದಪ್ಪ ಮಾತನಾಡಿ ಜನಾಂಗದ ಸಂಸ್ಕøತಿಯ ಪರಿಚಯ ಕ್ರೀಡಾಕೂಟದ ಮುಖ್ಯ ಉದ್ದೇಶವಾಗಿದೆ. ಜಿಲ್ಲೆಯಲ್ಲಿ ನಡೆಯುವ ಹಲವಾರು ಜನಾಂಗಗಳ ಕ್ರೀಡಾಕೂಟಗಳಿಗೆ ಸರ್ಕಾರ ಅನುದಾನ ನೀಡಿರುವ ರೀತಿಯಲ್ಲಿ ಯರವ ಜನಾಂಗವನ್ನು ಪ್ರೋತ್ಸಾಹಿಸಬೇಕಿದೆ ಎಂದು ಹೇಳಿದರು.

ಉಪಾಧ್ಯಕ್ಷ ಪ್ರಕಾಶ್ ಮಾತನಾಡಿ ಜನಾಂಗದ ಸದಸ್ಯರು ಸಾಂಸ್ಕøತಿಕ ಉಡುಗೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಸಂಸ್ಕøತಿಯ ಅನಾವರಣದ ಉದ್ದೇಶದಿಂದ ಕ್ರೀಡಾಕೂಟದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸ ಲಾಗುತ್ತಿದೆ. ಆದರೆ ಇಂದಿಗೂ ಜನಾಂಗಕ್ಕೆ ಸಮಾಜದಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂದು ಹೇಳಿದರು.

ಈ ಸಂದರ್ಭ ಯರವ ಸಮಾಜದ ಪದಾಧಿಕಾರಿಗಳು ಕಾಳಕೊಟ್ಲತ್ಲೇರಂಡ ಕ್ರಿಕೆಟ್ ಕಪ್ ಲಾಂಛನ ಬಿಡುಗಡೆಗೊಳಿಸಿದರು. ಗೋಷ್ಠಿಯಲ್ಲಿ ಸದಸ್ಯ ವೈ.ಎಂ. ರವಿ ಹಾಗೂ ನಿತಿನ್ ಇದ್ದರು.