ಮಡಿಕೇರಿ, ಏ. 2 : ದಕ್ಷಿಣ ಕೊಡಗಿನ ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೂರುವಿನ ಶ್ರೀ ಲಕ್ಷ್ಮೀವೆಂಕಟೇಶ್ವರ ಕಾಫಿ ಕ್ಯೂರಿಂಗ್ ವಕ್ರ್ಸ್ ಮೂಲಕ ಬೆಳೆಗಾರರಿಂದ ಕೋಟಿಗಟ್ಟಲೆ ರೂಪಾಯಿ ಮೌಲ್ಯದ ಕಾಫಿ ಖರೀದಿಸಿ ಹಣ ಪಾವತಿಸದೆ ವಂಚಿಸಿರುವ ಪ್ರಕರಣ ಸಂಬಂಧ ಇದೀಗ ವಂಚನೆಗೊಳಗಾಗಿರುವ ಬೆಳೆಗಾರರು ಕೇರಳದ ವಯನಾಡುವಿನ ಪುಲ್‍ಪಳ್ಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದಾರೆ.ಸುಮಾರು ಹತ್ತು ವರ್ಷಗಳಿಂದ ಕೋಟೂರು ನಿವಾಸಿ ಎ. ಎಂ. ಅರುಣ್ ಕುಮಾರ್ ಎಂಬವರಿಗೆ ಸೇರಿದ ಕ್ಯೂರಿಂಗ್ ವಕ್ರ್ಸ್ ಅನ್ನು ಗುತ್ತಿಗೆ ಪಡೆದುಕೊಂಡಿದ್ದ ಕೇರಳ ಮೂಲದ ಕೆಲವರು ವ್ಯಾಪಾರ ನಡೆಸುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಕಾಫಿ ಖರೀದಿಯೊಂದಿಗೆ ವ್ಯಾಪಾರ ನಡೆಸುತ್ತಿದ್ದ ಬಿಜೇಶ್ ಹಾಗೂ ಬಿಜುಜಾಕೋಬ್ ಎಂಬವರು ಕಳೆದ ಫೆಬ್ರವರಿ 27 ರಿಂದ ಬೆಳೆಗಾರರಿಗೆ ವಂಚಿಸಿ ನಾಪತ್ತೆಯಾಗಿದ್ದರು. ಈ ಬಗ್ಗೆ ಕಾಫಿ ಫಸಲನ್ನು ನೀಡಿರುವ ಬೆಳೆಗಾರರು ಸಂಶಯಗೊಂಡು, ಕಟ್ಟಡ ಮಾಲೀಕ ಅರುಣ್‍ಕುಮಾರ್ ಬಳಿ ಗಮನ ಸೆಳೆದಿದ್ದಾರೆ. ಈ ವೇಳೆ ಕಾಫಿ ಕ್ಯೂರಿಂಗ್ ವಕ್ರ್ಸ್‍ನ ಬಾಗಿಲು ತೆರದು ನೋಡಲಾಗಿ ವಂಚನೆ ಪ್ರಕರಣ ಬಹಿರಂಗ ಗೊಂಡಿತ್ತು. ಆ ಬೆನ್ನಲ್ಲೇ ಅರುಣ್‍ಕುಮಾರ್ ಸಹಿತ ಇತರ ಬೆಳೆಗಾರರು ಪೊನ್ನಂಪೇಟೆ ಠಾಣೆಯಲ್ಲಿ ಈ ವಂಚನೆ ಕುರಿತು ದೂರು ಸಲ್ಲಿಸಿದ್ದರು.

ಆ ಬಳಿಕ ಸರಿ ಸುಮಾರು ಒಂದು ತಿಂಗಳಿನಿಂದ ವಂಚಕ ವರ್ತಕರು ಪತ್ತೆಯಾಗದ ಹಿನ್ನೆಲೆಯಲ್ಲಿ; ಇದೀಗ ಗೋಣಿಕೊಪ್ಪ ಪೊಲೀಸ್ ವೃತ್ತ ನಿರೀಕ್ಷಕರಾಗಿ ನೇಮಕಗೊಂಡಿರುವ ಇನ್ಸ್‍ಪೆಕ್ಟರ್ ಹರಿಶ್ಚಂದ್ರ ಅವರ ಗಮನ ಸೆಳೆದಿರುವ ಬೆಳೆಗಾರರು, ಆರೋಪಿಗಳನ್ನು ಪತ್ತೆ ಹಚ್ಚಿ ತಮಗೆ ನ್ಯಾಯ ಕೊಡಿಸುವಂತೆ ಬೇಡಿಕೆ ಸಲ್ಲಿಸಿದ್ದಾರೆ. ಅಲ್ಲದೆ; ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಸಹಕಾರದೊಂದಿಗೆ ವಯನಾಡುವಿಗೆ ತೆರಳಿರುವ ಬೆಳೆಗಾರರ ತಂಡವೊಂದು ಆರೋಪಿಗಳಾದ ಬಿಜು ಹಾಗೂ ಬಿಜೇಶ್ ವಿರುದ್ಧ ಪುಲ್‍ಪಳ್ಳಿ ಠಾಣೆಯಲ್ಲಿ ದೂರು ಸಲ್ಲಿಸಿರುವದಾಗಿ ನೊಂದ ಬೆಳೆಗಾರರು ‘ಶಕ್ತಿ’ಗೆ ತಿಳಿಸಿದ್ದಾರೆ. ಆ ಮೂಲಕ ಪುಲ್‍ಪಳ್ಳಿ ಪೊಲೀಸರು ಆರೋಪಿಗಳ ಪೋಷಕರಿಂದ ಹೇಳಿಕೆ ಪಡೆದಿರುವದಾಗಿಯೂ ತಿಳಿದು ಬಂದಿದೆ.

ಸುಮಾರು ಹತ್ತು ವರ್ಷ ದಕ್ಷಿಣ ಕೊಡಗಿನಲ್ಲಿ ಕೋಟಿಗಟ್ಟಲೆ ರೂಪಾಯಿ ಮೌಲ್ಯದ ಕಾಫಿ ಖರೀದಿಸಿರುವ ವರ್ತಕರ ಬಗ್ಗೆ ಆ ನಂಬಿಕೆಯಿಂದಲೇ ಪ್ರಸಕ್ತ ಸಾಲಿನ ಫಸಲು ಮಾರಾಟಗೊಳಿಸಿದ್ದು, ಪ್ರಾರಂಭದಲ್ಲಿ ಬೆಳೆಗಾರರಿಗೆ ಅಲ್ಪಸಲ್ಪ ಹಣ ನೀಡಿ, ಕೇವಲ 15 ದಿನಗಳ ಅಂತರದಲ್ಲಿ ಅನೇಕ ಬೆಳೆಗಾರರಿಗೆ ಲಕ್ಷಗಟ್ಟಲೆ ತಲಾ ರೂಪಾಯಿಗಳನ್ನು ವಂಚಿಸಿರುವದಾಗಿ ಪುಲ್‍ಪಳ್ಳಿ ಪೊಲೀಸರ ಗಮನ ಸೆಳೆಯಲಾಗಿದೆ.

ಆ ಮೇರೆಗೆ ತಲೆಮರೆಸಿ ಕೊಂಡಿರುವ ವ್ಯಾಪಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಉಭಯ ಕಡೆ ಪೊಲೀಸರು ಆರೋಪಿಗಳ ಪೋಷಕರಿಗೆ

(ಮೊದಲ ಪುಟದಿಂದ) ಕಾನೂನಿನ ಬಿಸಿ ಮುಟ್ಟಿಸುವದರೊಂದಿಗೆ ತಲೆಮರೆಸಿಕೊಂಡಿರುವ ಬಿಜೇಶ್ ಹಾಗೂ ಬಿಜುವನ್ನು ಪೊಲೀಸ್ ಸಕ್ಷಮ ಹಾಜರುಪಡಿಸಿ ಬೆಳೆಗಾರರಿಗೆ ಮೋಸವೆಸಗಿರುವ ಹಣವನ್ನು ಹಿಂತಿರುಗಿಸುವಂತೆ ತಾಕೀತು ಮಾಡಿರುವದಾಗಿಯೂ ತಿಳಿದು ಬಂದಿದೆ.

ಕಿರುಗೂರು, ಬೆಸಗೂರು, ಬಲ್ಯಮಂಡರೂ, ಕೋಟೂರು ಸುತ್ತ ಮುತ್ತಲಿನ ಅನೇಕ ಬೆಳೆಗಾರರಿಂದ ಕಾಫಿ ಪಡೆದಿರುವ ಆರೋಪಿಗಳು ಅಂದಾಜು ರೂ. 2.50 ಕೋಟಿಗೂ ಅಧಿಕ ವಂಚಿಸಿರುವದಾಗಿ ಹೇಳಲಾಗುತ್ತಿದೆ. ಆರೋಪಿಗಳು ಸೆರೆ ಸಿಕ್ಕ ಬಳಿಕವಷ್ಟೇ ನಿಖರವಾಗಿ ಕಾಫಿ ಖರೀದಿಯಿಂದ ವಂಚನೆಯ ಮೊತ್ತ ತಿಳಿಯಲು ಸಾಧ್ಯವೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಂಶಯದಲ್ಲಿ ಬೆಳೆಗಾರರು : ವ್ಯಾಪಾರಿಗಳಾದ ಬಿಜೇಶ್ ಹಾಗೂ ಬಿಜು ಈ ಹಿಂದೆ ಕಾಫಿ ಕ್ಯೂರಿಂಗ್ ವಕ್ರ್ಸ್ ಮಾಲೀಕರೊಂದಿಗೆ ಮಾಡಿಕೊಂಡಿರುವ ಒಪ್ಪಂದ, ಕಿರುಗೂರು ಗ್ರಾ.ಪಂ. ನಿಂದ ಸಂಬಂಧಿಸಿದ ವ್ಯಕ್ತಿಗಳಿಗೆ ಅನುಮತಿ ಪತ್ರ ನೀಡುವ ಮುನ್ನ ಹೊಂದಿಕೊಂಡಿರುವ ದಾಖಲಾತಿ ಮತ್ತು ತಲೆಮರೆಸಿಕೊಂಡಿರುವವರ ಭಾವಚಿತ್ರ ಇತ್ಯಾದಿ ಬಗ್ಗೆ ಸೂಕ್ತ ಉತ್ತರವನ್ನು ಗ್ರಾ. ಪಂ.ನಲ್ಲಿ ನೀಡುತ್ತಿಲ್ಲವೆಂದು ಆರೋಪಿಸಿದ್ದಾರೆ.

ಈ ಬಗ್ಗೆ ಸಂಶಯಗೊಂಡಿರುವ ಬೆಳೆಗಾರರು, ಬಿಜು ಹಾಗೂ ಬಿಜೇಶ್ ವ್ಯವಸ್ಥಿತವಾಗಿ ತಲೆ ಮರೆಸಿಕೊಳ್ಳುವಲ್ಲಿ ಇತರರ ಕೈವಾಡವಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಭವಿಷ್ಯದಲ್ಲಿ ಬೆಳೆಗಾರರಿಗೆ ಇಂಥ ವಂಚನೆ ಎದುರಾಗದಂತೆ ಕಾಫಿ ಕ್ಯೂರಿಂಗ್ ವಕ್ರ್ಸ್ ಮಾಲೀಕರ ಸಹಿತ ಗ್ರಾ. ಪಂ. ಹಾಗೂ ಕಾಫಿ ಮಂಡಳಿ ಅಧಿಕಾರಿಗಳು ಅಪರಿಚಿತರಿಂದ ಸೂಕ್ತ ದಾಖಲಾತಿಗಳನ್ನು ಮತ್ತು ಅಂಥವರ ಪೂರ್ವಾಪರ ವಿಳಾಸ ಇತ್ಯಾದಿ ಹೊಂದಿಕೊಳ್ಳದೆ ವ್ಯಾಪಾರ ನಡೆಸಲು ಅವಕಾಶ ಕೊಡಬಾರದೆಂದು ಆಗ್ರಹಿಸಿದ್ದಾರೆ.

ಅಲ್ಲದೆ, ಉಭಯ ಕಡೆಯ ಪೊಲೀಸರು ತ್ವರಿತ ಕಾರ್ಯಾಚರಣೆ ಮೂಲಕ ವ್ಯಾಪಾರಿಗಳನ್ನು ಪತ್ತೆ ಹಚ್ಚಿ; ನೊಂದ ಬೆಳೆಗಾರರಿಗೆ ಕಾಫಿ ಹಣ ಕೊಡಿಸುವಂತೆ ಗಮನ ಸೆಳೆದಿದ್ದಾರೆ.