ಕುಶಾಲನಗರ, ಏ. 2: ಕಾವೇರಿ ನದಿಯಲ್ಲಿ ನೀರಿನ ಹರಿವು ಪ್ರಾರಂಭಗೊಳ್ಳುತ್ತಿದ್ದಂತೆ ಅಪಾಯದಂಚಿನಲ್ಲಿದ್ದ ಜಲಚರಗಳಿಗೆ ಮರುಜೀವ ಬಂದಂತಾಗಿದೆ. ಕುಶಾಲನಗರ ಕಾವೇರಿ ನಿಸರ್ಗಧಾಮದ ಬಳಿ ನದಿಯಲ್ಲಿ ಸೇರಿದಂತೆ ಎಲ್ಲೆಡೆ ನೆಲೆಸಿದ್ದ ಜಲಚರಗಳಿಗೆ ನೀರಿನ ಹರಿವಿನ ಕೊರತೆಯಿಂದ ಕಲುಷಿತಗೊಳ್ಳುವದರೊಂದಿಗೆ ಅಪಾಯ ಎದುರಾಗಿತ್ತು.

ನೀರಿನ ಹರಿವು ಕ್ಷೀಣಗೊಂಡ ಹಿನ್ನೆಲೆಯಲ್ಲಿ ಅಪರೂಪದ ಮಹಶೀರ್ ಮೀನುಗಳು ಸೇರಿದಂತೆ ವಿವಿಧ ಜಾತಿಯ ಮೀನುಗಳು ನದಿ ಕಲುಷಿತಗೊಳ್ಳುವದರೊಂದಿಗೆ ಆಮ್ಲಜನಕದ ಕೊರತೆ ಕಾರಣ ನದಿಯಲ್ಲಿ ಸತ್ತು ತೇಲುತ್ತಿದ್ದ ದೃಶ್ಯಗಳು ಕಂಡುಬಂದಿದ್ದವು. ವಾಲ್ನೂರು ಭಾಗದಿಂದ ಕುಶಾಲನಗರ ತನಕ ಕಾವೇರಿ ನದಿಯಲ್ಲಿ ಅಪರೂಪದ ಮಹಶೀರ್ ಮೀನುಗಳು ಟನ್‍ಗಟ್ಟಲೆ ಕಳೆದ ಕೆಲವು ವರ್ಷಗಳಿಂದ ನೆಲೆ ಕಂಡಿವೆ. ಈ ಸಾಲಿನಲ್ಲಿ ಕಾವೇರಿ ನದಿಯಲ್ಲಿ ಇವುಗಳಿಗೆ ಸಂಕಷ್ಟ ಎದುರಾಗಿತ್ತು. ವಿಷಯ ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಮೀನುಗಾರಿಕೆಯವರು ಇಲಾಖೆ ಸ್ಥಳೀಯ ಅರಣ್ಯ ಇಲಾಖೆ ಸಹಯೋಗದೊಂದಿಗೆ ಮೀನುಗಳನ್ನು ಸಂರಕ್ಷಣೆ ಮಾಡುವ ಸಂಬಂಧ ಕಾರ್ಯಾಚರಣೆ ನಡೆಸಿ ಭಾರೀ ಗಾತ್ರದ ಮೀನುಗಳನ್ನು ಹಾರಂಗಿ ಮೀನು ಸಂರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದರು.

ಕುಶಾಲನಗರ ಭಾಗದಲ್ಲಿ ಮಳೆಯಾಗಿದ್ದರೂ ನದಿಯಲ್ಲಿ ನೀರಿನ ಹರಿವು ಮಾತ್ರ ಏರಿಕೆಯಾಗಿಲ್ಲ. ಜಿಲ್ಲೆಯ ಕಾವೇರಿ ನದಿ ಪಾತ್ರದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ನೀರು ಹಾಯಿಸುತ್ತಿದ್ದ ಪಂಪ್‍ಗಳ ಬಳಕೆಗೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ನಿರ್ಬಂಧ ಹೇರಿದ ಬೆನ್ನಲ್ಲೇ ನದಿಯಲ್ಲಿ ನೀರಿನ ಹರಿವು ಪ್ರಾರಂಭಗೊಳ್ಳಲು ಅನುವು ಮಾಡಿಕೊಟ್ಟಿದ್ದು ಈ ಮೂಲಕ ಜಲಚರಗಳ ಅಸ್ತಿತ್ವದ ಉಳಿವಿಗೆ ಕಾರಣವಾಗಿದೆ ಎಂದು ಪರಿಸರ ಪ್ರೇಮಿಗಳು ಜಿಲ್ಲಾಧಿಕಾರಿಗಳ ಕ್ರಮವನ್ನು ಶ್ಲಾಘಿಸಿದ್ದಾರೆ.

-ಸಿಂಚು