ಮಡಿಕೇರಿ, ಏ. 2: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಚೆರಿಯಮನೆ ಕುಟುಂಬಸ್ಥರ ಆಶ್ರಯದಲ್ಲಿ ಏರ್ಪಡಿಸಲಾಗಿರುವ ಗೌಡ ಕುಟುಂಬಗಳ ನಡುವಿನ ಚೆರಿಯಮನೆ ಕ್ರಿಕೆಟ್ ಹಬ್ಬದಲ್ಲಿ ಈ ಬಾರಿ ಒಟ್ಟು 224 ಕುಟುಂಬ ತಂಡಗಳು ಭಾಗಿಯಾಗಲಿವೆ. ಪಂದ್ಯಾವಳಿಯ ನೋಂದಣಿ ಕಾರ್ಯ ಮುಕ್ತಾಯಗೊಂಡು ಇಂದು ಟೈಸ್ ಹಾಕುವ ಪ್ರಕ್ರಿಯೆ ನಡೆಯಿತು.ಕೊಡಗು ಗೌಡ ಸಮಾಜ ಸಭಾಂಗಣದಲ್ಲಿ, ಯುವ ವೇದಿಕೆ ಆಡಳಿತ ಮಂಡಳಿ ಪದಾಧಿಕಾರಿಗಳು, ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ತಂಡಗಳ ನಾಯಕರುಗಳು, ವ್ಯವಸ್ಥಾಪಕರುಗಳು, ಚೆರಿಯಮನೆ ಕುಟುಂಬಸ್ಥರ ಸಮ್ಮುಖದಲ್ಲಿ ಟೈಸ್ ಹಾಕಲಾಯಿತು. ಕ್ರಿಕೆಟ್ ಹಬ್ಬವು ತಾ. 15 ರಿಂದ ಆರಂಭಗೊಂಡು ಮೇ 5ರ ವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಳೆದ ಬಾರಿ ಪೈಕೇರ ಕಪ್ ಪಂದ್ಯಾವಳಿಯಲ್ಲಿ 110 ಕುಟುಂಬ ತಂಡಗಳು ಭಾಗಿಯಾಗಿದ್ದವು.