ಮಡಿಕೇರಿ ಏ.2: ವಿ 5 ಆಫ್ ರೋಡರ್ಸ್ ಕೂರ್ಗ್ ಸಂಸ್ಥೆಯ ವತಿಯಿಂದ ತಾ. 7 ರಂದು ಅಮ್ಮತ್ತಿಯಲ್ಲಿ ದ್ವಿತೀಯ ವರ್ಷದ ‘ಅಮ್ಮತ್ತಿ ರ್ಯಾಲಿ ಕ್ರಾಸ್-2018’ ಆಫ್ ರೋಡ್ ರ್ಯಾಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಉದ್ದಪಂಡ ಚೇತನ್ ಚಂಗಪ್ಪ ಮಾತನಾಡಿ, ಚತುಷ್ಚಕ್ರ ವಾಹನದ ಆಫ್ ರೋಡ್ ರ್ಯಾಲಿಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಗೋವಾ ರಾಜ್ಯಗಳ 110 ಕ್ಕೂ ಹೆಚ್ಚಿನ ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ರ್ಯಾಲಿ ಅಂದು ಬೆಳಗ್ಗೆ 9 ಗಂಟೆಗೆ ಉದ್ಘಾಟನೆಗೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಭಾರತೀಯ ಸೈನ್ಯದ ನಿವೃತ್ತ ಕ್ಯಾಪ್ಟನ್ ಕಾರಿಯಪ್ಪ ಪಟ್ಟಡ ಮತ್ತು ಐಎನ್‍ಆರ್‍ಸಿ-2016ರ ಓವರಾಲ್ ಛಾಂಪಿಯನ್ ಕರ್ಣ ಕಡೂರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.

ರ್ಯಾಲಿ ಪ್ರಮುಖವಾಗಿ 800ಸಿಸಿ, 1400ಸಿಸಿ, 1600ಸಿಸಿ, ಕೂರ್ಗ್ ಓಪನ್, ಇಂಡಿಯನ್ ಓಪನ್, ಜೀಪ್ ಓಪನ್, ಜಿಪ್ಸಿ ಓಪನ್ ವಿಭಾಗಗಳಲ್ಲಿ ನಡೆಯಲಿದೆ. ಸ್ಪರ್ಧಾತ್ಮಕ ಟ್ರ್ಯಾಕ್- ರ್ಯಾಲಿಯ ಸಲುವಾಗಿ ಅಮ್ಮತ್ತಿಯಲ್ಲಿ 900 ಮೀಟರ್‍ನ ಸ್ಪರ್ಧಾತ್ಮಕ ಟ್ರ್ಯಾಕ್ ಸಜ್ಜುಗೊಳಿಸಲಾಗಿದ್ದು, ಪ್ರತಿ ಸ್ಪರ್ಧೆ 2 ಸುತ್ತು ಅಂದರೆ 1.8 ಕಿ.ಮೀ.ನದ್ದಾಗಿರುತ್ತದೆಂದು ಚೇತನ್ ಚಂಗಪ್ಪ ತಿಳಿಸಿದರು.

ಪ್ರತಿ ವಿಭಾಗದಲ್ಲಿ ಮೊದಲ ಮೂರುÀ ಸ್ಥಾನಗಳನ್ನು ಪಡೆಯುವವರಿಗೆ ಅನುಕ್ರಮವಾಗಿ 7 ಸಾವಿರ, 5 ಸಾವಿರ ಮತ್ತು 3 ಸಾವಿರ ರೂ. ನಗದು ಮತ್ತು ಆಕರ್ಷಕ ಟ್ರೋಫಿಯನ್ನು ನೀಡಲಾಗುತ್ತದೆ. ರ್ಯಾಲಿಯ ಎಲ್ಲಾ ವಿಭಾಗಗಳಿಗೆ ಸೇರಿದಂತೆ ಅತೀ ವೇಗದ ಚಾಲಕ ಪ್ರಶಸ್ತಿಯಾಗಿ 25 ಸಾವಿರ ನಗದು ಬಹುಮಾನ ಹಾಗೂ ಉತ್ತಮ ಟರ್ನರ್ ಪ್ರಶಸ್ತಿಯಾಗಿ ಟ್ರೋಫಿಯನ್ನು ಪ್ರದಾನ ಮಾಡಲಾಗುತ್ತದೆ. ರ್ಯಾಲಿಯಲ್ಲಿ ವಾಹನಗಳು ಸ್ಪರ್ಧೆ ಪೂರ್ಣಗೊಳಿಸುವ ಸಮಯವನ್ನು ಲೇಸರ್ ಟೈಮಿಂಗ್ ಮೂಲಕ ಕರಾರುವಾಕ್ಕಾಗಿ ದಾಖಲಿಸಿಕೊಳ್ಳಲಾಗುತ್ತದೆಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅಂತರ್‍ರಾಷ್ಟ್ರೀಯ ರ್ಯಾಲಿ ಪಟು ಮಾಳೇಟಿರ ಜಗತ್ ನಂಜಪ್ಪ ಹಾಗೂ ವಿ 5 ಆಫ್ ರೋಡರ್ಸ್ ಕೂರ್ಗ್‍ನ ಪ್ರಮುಖರಾದ ಉದ್ದಪಂಡ ತಿಮ್ಮಣ್ಣ ಉಪಸ್ಥಿತರಿದ್ದರು.