ಮಡಿಕೇರಿ, ಏ. 2: ಜಿಲ್ಲೆಯ ಪ್ರಮುಖ ಪ್ರವಾಸೀ ತಾಣಗಳಲ್ಲೊಂದಾದ ಮಂಜಿನ ನಗರಿ ಮಡಿಕೇರಿಯ ರಾಜಾಸೀಟ್ ಉದ್ಯಾನಕ್ಕೆ ತೆರಳುವ ಮಾರ್ಗದಲ್ಲಿನ್ನು ಅಲಂಕಾರಿಕ ದೀಪಗಳು ಕಂಗೊಳಿಸಲಿವೆ. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಈ ಯೋಜನೆ ರೂಪಿಸಲಾಗಿದ್ದು, ಮಡಿಕೇರಿ ನಗರಸಭೆ ಮೂಲಕ ಕಾಮಗಾರಿ ನಡೆಯಲಿದೆ.ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚುಮ್ಮಿ ದೇವಯ್ಯ ಅವರ ಆಸಕ್ತಿ ಮೇರೆಗೆ ರಾಜಾಸೀಟ್ ರಸ್ತೆಯಲ್ಲಿ ಮಹಾನಗರಗಳಲ್ಲಿ ಇರುವಂತೆ ರಸ್ತೆ ಬದಿಯಲ್ಲಿ ಅಲಂಕಾರಿಕ ವಿದ್ಯುತ್ ದೀಪಗಳನ್ನು ಅಳವಡಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಒಟ್ಟು ರೂ. 20 ಲಕ್ಷ ವೆಚ್ಚದಲ್ಲಿ 20 ದೀಪದ ಕಂಬಗಳನ್ನು ಅಳವಡಿಸಲಾಗುತ್ತಿದೆ. ಡಿ.ಸಿ.ಸಿ. ಬ್ಯಾಂಕ್ ಬಳಿಯಿಂದ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದವರೆಗೆ ರಸ್ತೆಯ ಒಂದು ಬದಿಯಲ್ಲಿ ಈ ಅಲಂಕಾರಿಕ ದೀಪಗಳು ರಾರಾಜಿಸಲಿವೆ.

(ಮೊದಲ ಪುಟದಿಂದ) ಸುಮಾರು 24 ಅಡಿ ಎತ್ತರದ ಈ ದೀಪಗಳಿಂದಾಗಿ ರಾಜಬೀದಿಗೆ ಇನ್ನಷ್ಟು ಕಳೆ ಮೂಡಲಿದೆ.

ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ದೊರೆತಿದ್ದು, ಪ್ರಾಧಿಕಾರದಿಂದಲೇ ಮಾಡಬಹುದಿತ್ತಾದರೂ, ಇನ್ನೂ ಕೂಡ ಪ್ರಾಧಿಕಾರದಲ್ಲಿ ಆನ್‍ಲೈನ್ ತಂತ್ರಜ್ಞಾನದ ಇ-ಪ್ರೊಕ್ಯೂರ್‍ಮೆಂಟ್ ವ್ಯವಸ್ಥೆ ಅಳವಡಿಕೆಯಾಗದಿರುವ ಹಿನ್ನೆಲೆಯಲ್ಲಿ ಇದೀಗ ನಗರಸಭೆ ಮೂಲಕ ಕಾಮಗಾರಿ ಹಮ್ಮಿಕೊಳ್ಳಲಾಗುತ್ತಿದೆ. ಕಳೆದ ಮಾ.24ರಂದೇ ಈ ಯೋಜನೆಗೆ ಟೆಂಡರ್ ಅನುಮೋದನೆಯಾಗಿದ್ದು, ಮಡಿಕೇರಿಯ ಶಾ ಇಲೆಕ್ಟ್ರಿಕಲ್ಸ್‍ನ ಎ.ಎಂ. ಸಮೀಯುಲ್ಲ ಗುತ್ತಿಗೆ ಪಡೆದುಕೊಂಡಿದ್ದಾರೆ. ಸದ್ಯದಲ್ಲೇ ರಾಜಾಸೀಟ್ ರಸ್ತೆ ಅಲಂಕಾರಗೊಳ್ಳಲಿದೆ. -ಸಂತೋಷ್.