ಗೋಣಿಕೊಪ್ಪಲು, ಏ.2 : ಕರ್ನಾಟಕ ರಾಜ್ಯ ರೈತ ಸಂಘದಲ್ಲಿ ಶಿಸ್ತಿಗೆ ಮೊದಲ ಆದ್ಯತೆ ನೀಡುತ್ತಿದ್ದು ಸದಸ್ಯರು ಹೋರಾಟಗಳಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕಾಧ್ಯಕ್ಷ ಮನು ಸೋಮಯ್ಯ ಹೇಳಿದರು.

ಇಲ್ಲಿನ ರೈತ ಸಂಘದ ಕಚೇರಿಯಲ್ಲಿ ಆಯೋಜನೆಗೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ರೈತ ಸಂಘಕ್ಕೆ ಉತ್ತಮ ನೆಲೆಗಟ್ಟಿದ್ದು ಹಲವು ಹೋರಾಟದ ಮೂಲಕ ರೈತರ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಮುಂದೆಯೂ ಹೋರಾಟವನ್ನು ಕೈಗೆತ್ತಿಕೊಂಡು ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಲಾಗುವದು ಜಿಲ್ಲೆಯ ವಿವಿಧೆಡೆಗಳಿಂದ ರೈತ ಸಂಘಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.

ರೈತ ಸಂಘದ ಮುಖಂಡ ನಲ್ಲೂರಿನ ಪುಚ್ಚಿಮಾಡ ಲಾಲಾ ಪೂಣಚ್ಚ ಮಾತನಾಡಿ, ತತ್ವ ಸಿದ್ದಾಂತದಡಿಯಲ್ಲಿ ರೈತ ಸಂಘ ಬೆಳೆದು ಬಂದಿದೆ. ನೋಂದಾಯಿತ ಸದಸ್ಯರು ಸಂಘಟನೆಯ ವಿಚಾರದಲ್ಲಿ ಬದ್ದತೆ ಕಾಪಾಡಬೇಕು ಎಂದರು. ಮುಖಂಡ ಪುಚ್ಚಿಮಾಡ ಸುಭಾಷ್ ಮಾತನಾಡಿ, ಸಂಘವನ್ನು ದುರುಪಯೋಗಪಡಿಸಿಕೊಳ್ಳದೆ ಒಳ್ಳೆಯ ರೀತಿಯಲ್ಲಿ ಸದಸ್ಯರು ನಡೆದುಕೊಳ್ಳಬೇಕು ಎಂದರು. ಮರಗೋಡು ಗ್ರಾ.ಪಂ ಅಧ್ಯಕ್ಷ ಬಿದ್ರುಪಣೆ ಮೋಹನ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ರೈತ ಸಂಘದ ಅಸ್ತಿತ್ವ ಬೆಳೆಯಬೇಕಾಗಿದೆ ಎಂದರು.

ಸಭೆಯಲ್ಲಿ ರೆವಿನ್ಯೂ ಇಲಾಖೆಗಳಲ್ಲಿ ಕೆಲವು ಅಧಿಕಾರಿಗಳು ರೈತರ ಕಡತಗಳಿಗೆ ವಿಳಂಬ ದೋರಣೆ ಮಾಡುತ್ತಿರುವ ಬಗ್ಗೆ ಚರ್ಚೆ ನಡೆಯಿತು. ಮುಂದಿನ ದಿನದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಅಂತಹ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮಕ್ಕೆ ಒತ್ತಾಯಿಸಲು ತೀರ್ಮಾನಿಸಲಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರಿಗೆ ಹಸಿರು ಶಾಲು ಹೊದಿಸಿ ಸಂಘಟನೆಗೆ ಸೇರ್ಪಡೆಗೊಳಿಸಲಾಯಿತು. ನೂತನ ಸದಸ್ಯರಿಗೆ ಪ್ರಮಾಣ ವಚನ ಭೋಧಿಸಲಾಯಿತು. ರೈತ ಮುಖಂಡ ಮಲ್ಚೀರ ಅಶೋಕ್, ಸಂತೋಷ್, ಆದೇಂಗಡ ಅಶೋಕ್, ತೀತಿರಮಾಡ ಸುನೀಲ್ ಇದ್ದರು.

ಜಿಲ್ಲಾ ಸಂಚಾಲಕ ಚಿಮ್ಮಂಗಡ ಗಣೇಶ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಚಟ್ರುಮಾಡ ಸುಜಯ್ ಬೋಪಯ್ಯ ಪ್ರಮಾಣ ವಚನ ಬೋಧಿಸಿದರು. ಮುಖಂಡರಾದ ಚೋನಿರ ಸತ್ಯ ವಂದಿಸಿದರು.