ಮಡಿಕೇರಿ, ಏ. 2: ಕೊಡಗು ಜಿಲ್ಲೆಯು ಒಂದೊಮ್ಮೆ ಪ್ರಕೃತಿದತ್ತವಾಗಿದ್ದ ವನ ಸಂಪತ್ತು ಹಾಗೂ ಜಲಮೂಲ ನಾಶದೊಂದಿಗೆ ಹೊರಗಿನಿಂದ ಬರುವ ವಾಹನಗಳ ದಟ್ಟಣೆಯಿಂದ ಗಂಭೀರ ಅಪಾಯ ಎದುರಿಸುವಂತಾಗಿದೆ ಎಂದು ನಿವೃತ್ತ ಏರ್‍ಮಾರ್ಷಲ್ ಕೆ.ಸಿ. ಕಾರ್ಯಪ್ಪ ಕಳವಳ ವ್ಯಕ್ತಪಡಿಸಿದರು. ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ, ಪೊಲೀಸ್ ಧ್ವಜ ದಿನಾಚರಣೆ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಂಸ್ಮರಣ ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಭವಿಷ್ಯದಲ್ಲಿ ಅತ್ಯಂತ ಕಠಿಣ ಸನ್ನಿವೇಶ ಎದುರಾಗಬಹುದು ಎಂದು ವ್ಯಾಖ್ಯಾನಿಸಿದ ಅವರು, ಆ ಪೊಲೀಸ್ ಇಲಾಖೆಯ ಕೊಡಗು ಘಟಕದಲ್ಲಿ ಉತ್ತಮ ಸೇವೆಗಾಗಿ ನೀಡಲ್ಪಡುವ ಭಾರತದ ಹೆಮ್ಮೆಯ ವೀರ ಸೇನಾನಿ ಫೀ.ಮಾ. ಕಾರ್ಯಪ್ಪ ನೆನಪಿನ ಪಾರಿತೋಷಕವು ಈ ಬಾರಿ ಜಿಲ್ಲಾ ಪೊಲೀಸ್ ವಿಶೇಷ ದಳದ ಸಿ.ಡಿ. ಆನಂದ್ ಅವರಿಗೆ ಲಭಿಸಿದೆ. ವೀರ ಸೇನಾನಿಯ ಪುತ್ರ ನಿವೃತ್ತ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಅವರು, ಇಂದು ನಗರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪಾರಿತೋಷಕದೊಂದಿಗೆ ನಗದು ಬಹುಮಾನ ನೀಡಿ ಗೌರವಿಸಿದರು.

ದಿಕ್ಕಿನಲ್ಲಿ ಪ್ರತಿಯೊಬ್ಬರು ಅರಣ್ಯ ಸಂಪತ್ತಿನೊಂದಿಗೆ ಜಲಮೂಲ ಸಂರಕ್ಷಣೆಗೆ ಕಾಳಜಿ ವಹಿಸಬೇಕೆಂದು ಕರೆ ನೀಡಿದರು. ಕೊಡಗು ಪೊಲೀಸ್ ಇಲಾಖೆ ದೈನಂದಿನ ಪರಿಸ್ಥಿತಿಯನ್ನು ಸಮರ್ಪಕವಾಗಿ

(ಮೊದಲ ಪುಟದಿಂದ) ಎದುರಿಸುತ್ತಿದೆ ಎಂದು ಶ್ಲಾಘಿಸಿದ ಅವರು, ವಾಹನ ದಟ್ಟಣೆ ನಡುವೆ ಅಜಾಗರೂಕತೆಯಿಂದ ವರ್ತಿಸುವ ಪ್ರವಾಸಿ ಚಾಲಕರ ಬಗ್ಗೆ ಕಟ್ಟೆಚ್ಚರ ಅಗತ್ಯವೆಂದು ಮಾರ್ನುಡಿದರು.

ತಾವು ಗಮನಿಸಿದಂತೆ ಓರ್ವ ಮಹಿಳಾ ಪೊಲೀಸ್ ಸಿಬ್ಬಂದಿ ಅಜಾಗರೂಕ ಚಾಲನೆ ನಿರತ ವಾಹನ ಚಾಲಕನೊಬ್ಬನನ್ನು ತಡೆದು, ದಂಡ ವಿಧಿಸುವ ಮೂಲಕ ಕಾನೂನು ಕ್ರಮ ಜರುಗಿಸಿದ್ದು, ಇಲಾಖೆಯ ಕಾರ್ಯದಕ್ಷತೆಗೆ ಕನ್ನಡಿಯಂತಿತ್ತು ಎಂದು ಅವರು ಮೆಚ್ಚುಗೆಯ ನುಡಿಯಾಡಿದರು. ಈ ದಿಕ್ಕಿನಲ್ಲಿ ಪೊಲೀಸ್ ಇಲಾಖೆಯ ನಿಷ್ಠಾವಂತರನ್ನು ಗುರುತಿಸಿ ಫೀ.ಮಾ. ಕಾರ್ಯಪ್ಪ ಹೆಸರಿನಲ್ಲಿ ಪ್ರತಿವರ್ಷ ಗೌರವಿಸುವದು ಶ್ಲಾಘನೀಯ ಎಂದು ನೆನಪಿಸಿದ ಅವರು, ಸಮಾಜದ ರಕ್ಷಣೆಯಲ್ಲಿ ಸಾಮೂಹಿಕ ನೆಲೆಗಟ್ಟಿನಲ್ಲಿ ಸವಾಲುಗಳನ್ನು ಪೊಲೀಸರು ಎದುರಿಸುವಂತೆ ಕರೆ ನೀಡಿದರು.

ಎಲ್ಲರು ಮತದಾನಕ್ಕೆ ಕರೆ: ಮುಂಬರುವ ಚುನಾವಣೆಯಲ್ಲಿ ಎಲ್ಲರು ಭಾರತದ ಪ್ರಜೆಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಲಭ್ಯವಿರುವ ತಮ್ಮ ಹಕ್ಕನ್ನು ಮತದಾನದ ಮುಖಾಂತರ ಚಲಾಯಿಸುವಂತೆಯೂ ನಿ. ಏರ್‍ಮಾರ್ಷಲ್ ಕರೆ ನೀಡಿದರು.

ತಾರತಮ್ಯ ಬೇಡ: ಪೊಲೀಸ್ ಇಲಾಖೆಯ ನಿವೃತ್ತ ಸಹಾಯಕ ಉಪ ನಿರೀಕ್ಷಕ ಕೆ.ಎಸ್. ಕುಶಾಲಪ್ಪ ಪಾಲ್ಗೊಂಡು ಮಾತನಾಡುತ್ತಾ, ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳು ಮತ್ತು ನಿವೃತ್ತ ಉದ್ಯೋಗಿಗಳ ನಡುವೆ ತಾರತಮ್ಯವಿಲ್ಲದಂತೆ ಎಲ್ಲರು ನಡೆದುಕೊಳ್ಳಬೇಕೆಂದು ಕರೆ ನೀಡಿದರು.

ಇಲಾಖೆಯಿಂದ ನಿವೃತ್ತಿ ನಂತರದ ಜೀವನದಲ್ಲಿ ಪೊಲೀಸರ ಕ್ಷೇಮನಿಧಿಯಿಂದ ಲಭ್ಯವಿರುವ ಆರೋಗ್ಯ ಸೇವಾ ಯೋಜನೆಯನ್ನು ಪ್ರತಿಯೊಬ್ಬರು ಸದುಪಯೋಗ ಮಾಡಿಕೊಂಡು ನೆಮ್ಮದಿಯಿಂದ ಬಾಳುವಂತೆ ಸಲಹೆ ನೀಡಿದರು. ಕರ್ತವ್ಯ ನಿರತರಾಗಿದ್ದಾಗ ಠಾಣೆಗಳಿಗೆ ಬರುವ ನೊಂದವರ ನೋವನ್ನು ಅಂತಹವರ ಸ್ಥಾನದಲ್ಲಿದ್ದು ಪೊಲೀಸರು ಯೋಚಿಸುವಂತೆ ತಿಳಿಹೇಳಿದ ಕುಶಾಲಪ್ಪ; ನೊಂದವರ ಕಷ್ಟ ನೀಗಿದರೆ ಇಲಾಖೆಯೊಂದಿಗೆ, ಪೊಲೀಸರಿಗೂ ಒಳ್ಳೆಯ ಹೆಸರು ಬರಲಿದೆ ಎಂದರು.

ಆ ದಿಕ್ಕಿನಲ್ಲಿ ಕೆಲಸ ನಿರ್ವಹಿಸುವದರಿಂದ ಸಮಾಜವು ಸದಾ ಸ್ಮರಿಸುವದೆಂದು ನುಡಿದರಲ್ಲದೆ, ಮುಂದಿನ ಚುನಾವಣೆಯನ್ನು ಶಾಂತಿಯಿಂದ ಎದುರಿಸಲು ಪೊಲೀಸ್ ಇಲಾಖೆ ಸದೃಢಗೊಳ್ಳಬೇಕೆಂದು ತಿಳಿಹೇಳಿದರು.

ವರ್ಷವಿಡೀ ಸೇನೆಗೆ ಪುರಸ್ಕಾರ: ಪ್ರಜಾಪ್ರಭುತ್ವ ವ್ಯವಸ್ಥೆಯಡಿ ದೇಶದ ಸೇನೆಯೊಂದಿಗೆ ಸಮಾಜ ರಕ್ಷಣೆಯಲ್ಲಿ ವರ್ಷವಿಡೀ ದುಡಿಯುವ ಪೊಲೀಸರು, ಧ್ವಜ ದಿನಾಚರಣೆ ಕಾರ್ಯಕ್ರಮದಿಂದ ಕ್ರೋಢೀಕರಿಸುವ ಕಲ್ಯಾಣ ನಿಧಿಯಿಂದ ನೊಂದವರಿಗೆ ಸ್ವಲ್ಪಮಟ್ಟಿಗೆ ನೆರವು ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರಪ್ರಸಾದ್ ನುಡಿದರು. ಈ ವೇಳೆ ಉತ್ತಮ ರೀತಿ ಕರ್ತವ್ಯ ನಿರ್ವಹಿಸುವವರನ್ನು ಗುರುತಿಸಿ ಕಳೆದ 23 ವರ್ಷಗಳಿಂದ ಕೊಡಗಿನ ವೀರ ಸೇನಾನಿ ಹೆಸರಿನಲ್ಲಿ ಫೀ.ಮಾ. ಕಾರ್ಯಪ್ಪ ಪಾರಿತೋಷಕ ನೀಡಲಾಗುತ್ತಿದೆ ಎಂದು ನೆನಪಿಸಿದರು.

1965 ಏಪ್ರಿಲ್ 2ರಿಂದ ಪೊಲೀಸ್ ಧ್ವಜ ದಿನಾಚರಣೆ ಜಾರಿಯಿದ್ದು, ಜಿಲ್ಲೆಯಲ್ಲಿ 700ಕ್ಕೂ ಅಧಿಕ ನಿವೃತ್ತ ಕುಟುಂಬಗಳೊಡನೆ ಪ್ರತಿವರ್ಷ ಜತೆಗೂಡಿ ಕರ್ತವ್ಯ ನಿರತ ಪೊಲೀಸರು ಕಾರ್ಯಕ್ರಮ ನಡೆಸುತ್ತಾ, ಕಷ್ಟದಲ್ಲಿರುವವರಿಗೆ ಆರ್ಥಿಕ ನೆರವು ನೀಡುತ್ತಿರುವದಾಗಿಯೂ ವಿವರಿಸಿದರು.

ಆಕರ್ಷಕ ಪಥಸಂಚಲನ: ಪೊಲೀಸ್ ಧ್ವಜ ದಿನಾಚರಣೆ ಸಂಬಂಧ ಇಲಾಖೆಯ ಅಧಿಕಾರಿ ತಿಮ್ಮಪ್ಪಗೌಡ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನದೊಂದಿಗೆ ನಾಗರಿಕ ಪೊಲೀಸ್, ಪೊಲೀಸ್ ಸಶಸ್ತ್ರ ಪಡೆ, ನಿಸ್ತಂತು ಘಟಕ, ಮಹಿಳಾ ಪೊಲೀಸ್ ಬಳಗದಿಂದ ಧ್ವಜ ವಂದನೆಯೊಂದಿಗೆ ಅತಿಥಿಗಳಿಗೆ ಗೌರವ ರಕ್ಷೆ ನೀಡ ಲಾಯಿತು. ಪೊಲೀಸ್ ವಾದ್ಯದೊಂದಿಗೆ ದೇಶಭಕ್ತಿ ಗೀತೆ ಮೊಳಗಿತು.

ನಿವೃತ್ತ ಪೊಲೀಸ್ ಅಧಿಕಾರಿಗಳಾದ ಎಂ.ಎ. ಅಪ್ಪಯ್ಯ, ವೈ.ಡಿ. ಕೇಶವಾನಂದ, ಸೋಮಣ್ಣ, ಪೂಣಚ್ಚ, ಸುಮತಿ ಸುಬ್ಬಯ್ಯ ಸೇರಿದಂತೆ ಅತಿಥಿಗಳೊಂದಿಗೆ ಜಿಲ್ಲೆಯ ಪ್ರೊಬೇಷನರಿ ಪೊಲೀಸ್ ಅಧೀಕ್ಷಕ ಯತೀಶ್, ವೀರಾಜಪೇಟೆ ಉಪ ವಿಭಾಗದ ಡಿವೈಎಸ್ಪಿ ನಾಗಪ್ಪ, ಕುಶಾಲನಗರ ಉಪವಿಭಾಗದ ಶ್ರೀನಿವಾಸಮೂರ್ತಿ ಸೇರಿದಂತೆ ಎಲ್ಲಾ ವೃತ್ತ ನಿರೀಕ್ಷಕರು, ಠಾಣಾಧಿಕಾರಿಗಳು, ಪೊಲೀಸ್ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು. ಸಶÀಸ್ತ್ರ ಪೊಲೀಸ್ ಘಟಕದ ಅಂತೋಣಿ ಡಿಸೋಜ ಹಾಗೂ ಫಾರೂಕ್ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಎಸ್ಪಿ ಎಂ.ಎ. ಅಪ್ಪಯ್ಯ ವಂದಿಸಿದರು.