ಮಡಿಕೇರಿ, ಏ. 2: ಭಾರತದ ವೀರ ಸೇನಾನಿ ಜನರಲ್ ಕೆ.ಎಸ್. ತಿಮ್ಮಯ್ಯ ಅವರ 112ನೇ ಜನ್ಮದಿನೋತ್ಸವ ಅಂಗವಾಗಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು, ಸೇನಾನಿಯ ಭಾವಚಿತ್ರದೊಂದಿಗೆ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಶಾಲಾ ಆವರಣದಿಂದ ಜನರಲ್ ತಿಮ್ಮಯ್ಯ ವೃತ್ತದ ತನಕ ಮೆರವಣಿಗೆ ಯಲ್ಲಿ ಬಂದು ವೀರ ಸೇನಾನಿಯ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.

ಮರಳಿ ಶಾಲಾ ಆವರಣಕ್ಕೆ ಹಿಂತಿರುಗುವದರೊಂದಿಗೆ ಕೊಡಗಿನ ಹೆಮ್ಮೆಯ ಸುಪುತ್ರ ಕೊಡಂದೇರ ಎಸ್. ತಿಮ್ಮಯ್ಯ ಅವರ ಗುಣಗಾನ ನಡೆಯಿತು. ವಿದ್ಯಾಸಂಸ್ಥೆ ಹಾಗೂ ಕೊಡವ ಸಮಾಜದ ಅಧ್ಯಕ್ಷ ಕೊಂಗಾಂಡ ಎಸ್. ದೇವಯ್ಯ ಅಧ್ಯಕ್ಷತೆ ವಹಿಸಿ, ಮಾತನಾಡುವದರೊಂದಿಗೆ, ಜನರಲ್ ತಿಮ್ಮಯ್ಯ ಅವರ ವ್ಯಕ್ತಿತ್ವ, ಧೈರ್ಯ, ಸಾಹಸವನ್ನು ಮಕ್ಕಳು ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.

ಶಾಲಾ ಕರೆಸ್ಪಾಂಡೆಂಟ್ ಮಣವಟ್ಟಿರ ಚಿಣ್ಣಪ್ಪ, ಪ್ರಾಂಶುಪಾಲೆ ಕಲ್ಮಾಡಂಡ ಸರಸ್ವತಿ, ಕೊಡವ ಸಮಾಜದ ಪದಾಧಿಕಾರಿಗಳಾದ ಅರೆಯಡ ರಮೇಶ್, ಚೋವಂಡ ಕಾಳಪ್ಪ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು, ಶಾಲಾ ಪ್ರಮುಖರು ಹಾಜರಿದ್ದರು.

ಈ ಸಂದರ್ಭ ಜನರಲ್ ತಿಮ್ಮಯ್ಯ ಅವರ ಕುರಿತಾಗಿ ಭಾಷಣ ಸ್ಪರ್ಧೆ, ಬೊಳಕಾಟ್, ಉಮ್ಮತ್ತಾಟ್ ಪ್ರದರ್ಶನ ನೆರವೇರಿತು. ತಿಮ್ಮಯ್ಯ ಅವರ ಬದುಕಿನ ಕುರಿತಾಗಿ ಶಿಕ್ಷಕಿ ಮಾದೇಟಿರ ಪ್ರಮೀಳಾ ಜೀವನ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಲಾವಣಿ ಮೂಲಕ ನೀಡಿದ ಪ್ರದರ್ಶನ ಗಮನ ಸೆಳೆಯಿತು.

ಮಕ್ಕಳಿಂದ ದೇಶಭಕ್ತಿ ಗಾಯನ ದೊಂದಿಗೆ ಸಾಂಸ್ಕøತಿಕ ಚಟುವಟಿಕೆ ನಡೆಯಿತು. ವಿದ್ಯಾಸಂಸ್ಥೆಯ ಅಧ್ಯಾಪಕ ವೃಂದ, ಆಡಳಿತ ಮಂಡಳಿ ಪದಾಧಿಕಾರಿಗಳು, ಕೊಡವ ಸಮಾಜ ಪ್ರಮುಖರು ಭಾಗವಹಿಸಿದ್ದರು.