ಮಡಿಕೇರಿ, ಏ.2 : ಕೇವಲ ಒಂದು ಜನಾಂಗವೊಂದರ ನಡುವಿನ ಕ್ರೀಡಾಕೂಟವಾದರೂ ಹತ್ತು ಹಲವು ವಿಶೇಷತೆಗಳ ಮೂಲಕ ವಿಶ್ವದ ಗಮನ ಸೆಳೆದಿರುವ ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್ ದಾಖಲೆ ಹೊಂದಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ನಾಪೋಕ್ಲು ಪಟ್ಟಣ ಸದ್ದಿಲ್ಲದೆ ಸಜ್ಜಾಗುತ್ತಿದೆ. 2003ರಲ್ಲಿ ನಡೆದ ಕಲಿಯಂಡ ಕಪ್, ಕಳೆದ ವರ್ಷ ಯಶಸ್ಸು ಕಂಡ ಬಿದ್ದಾಟಂಡ ಕಪ್ ಹಾಕಿ ಉತ್ಸವದ ಬಳಿಕ ಇದೀಗ ಮರು ವರ್ಷವೂ ನಾಪೋಕ್ಲುವಿನಲ್ಲಿ ಹಾಕಿ ಉತ್ಸವ ಜರುಗಲಿದ್ದು, ಈ ಬಾರಿಯ ಆಯೋಜಕರು ಮಾಜಿ ಚಾಂಪಿಯನ್ ತಂಡವಾಗಿರುವ ಕುಲ್ಲೇಟಿರ ಕುಟುಂಬಸ್ಥರು. ಕ್ಲಿಷ್ಟಕರವಾದ ಹಾಕಿ ಉತ್ಸವ ಆಯೋಜನೆಯ ಸಂದರ್ಭವೇ ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆಯೂ ಎದುರಾಗಲಿದ್ದು, ಚುನಾವಣೆಯ ಭರಾಟೆಯ ನಡುವೆಯೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಜನರಲ್ ಕೆ.ಎಸ್. ತಿಮ್ಮಯ್ಯ ಮೈದಾನ ಸೇರಿದಂತೆ ಕಳೆದ ವರ್ಷ ಬಿದ್ದಾಟಂಡ ಕುಟುಂಬಸ್ಥರು ನಿರ್ಮಿಸಿರುವ ಹೊಸ ಮೈದಾನ ಸೇರಿ ಒಟ್ಟು ಮೂರು ಮೈದಾನಗಳಲ್ಲಿ ಒಂದು ತಿಂಗಳ ಕಾಲ ಕ್ರೀಡಾಭಿಮಾನಿಗಳಿಗೆ ಹಾಕಿಯ ರಸದೌತಣ ಸಿಗಲಿದೆ. ಮೈದಾನದ ಸಮರ್ಪಕತೆ, ಗ್ಯಾಲರಿ ನಿರ್ಮಾಣ ಸೇರಿದಂತೆ ಇನ್ನಿತರ ಅಗತ್ಯತೆಗಳಿಗಾಗಿ ಕುಲ್ಲೇಟಿರ ಕುಟುಂಬಸ್ಥರು ಅಗತ್ಯ ಸಿದ್ಧತೆಯಲ್ಲಿ ನಿರತರಾಗಿದ್ದಾರೆ.

ಕೊಡವ ಕುಟುಂಬಗಳ ನಡುವಿನ 22ನೇ ವರ್ಷದ ಹಾಕಿ ಉತ್ಸವ ಇದಾಗಿದ್ದು, ಈ ಉತ್ಸವವನ್ನು ಹತ್ತು ಹಲವರು ವಿಶೇಷತೆಗಳ ಮೂಲಕ ಯಶಸ್ವಿಗೊಳಿಸಲು ಕುಲ್ಲೇಟಿರ ಕುಟುಂಬಸ್ಥರು ಮುಂದಾಗಿದ್ದಾರೆ.

ಕೊಡವ ಹಾಕಿ ಅಕಾಡೆಮಿ, ಹಾಕಿ ಕೂರ್ಗ್, ಹಾಕಿ ಕರ್ನಾಟಕ ಹಾಗೂ ಹಾಕಿ ಇಂಡಿಯಾದ ಸಹಕಾರದೊಂದಿಗೆ ಈ ಪಂದ್ಯಾವಳಿ ನಡೆಯಲಿದ್ದು, ಏಪ್ರಿಲ್ 15ರಂದು ಪ್ರಾರಂಭಗೊಳ್ಳಲಿದೆ.

250 ತಂಡಗಳ ನೋಂದಣಿ

ಈ ಬಾರಿಯ ಹಾಕಿ ಉತ್ಸವಕ್ಕೆ ಈಗಾಗಲೇ 250ರಷ್ಟು ಕುಟುಂಬಗಳು ಹೆಸರು ನೋಂದಾಯಿಸಿಕೊಂಡಿವೆ. ಸುಮಾರು 300ಕ್ಕೂ ಅಧಿಕ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಸಂಘಟಕರದ್ದಾಗಿದೆ. ಏ. 5ರವರೆಗೆ ಹೆಸರು ನೋಂದಾವಣೆಗೆ ಅವಧಿ ವಿಸ್ತರಿಸಲಾಗಿದೆ. ಅಂದಾಜು ರೂ. 1.50 ಕೋಟಿ ವೆಚ್ಚದಲ್ಲ್ಲಿ ಈ ಪಂದ್ಯಾವಳಿ ಜರುಗಲಿದ್ದು, ರಾಜ್ಯ ಸರಕಾರದಿಂದ ರೂ. 40 ಲಕ್ಷ ಅನುದಾನದ ಸಾಧ್ಯತೆಯಿದೆ.

(ಮೊದಲ ಪುಟದಿಂದ) ಸಂಸದ ಪ್ರತಾಪ್ ಸಿಂಹ ಅವರು ರೂ. 20 ಲಕ್ಷ ಅನುದಾನದ ಭರವಸೆ ನೀಡಿದ್ದು, ಇದರಲ್ಲಿ ಸ್ಥಳೀಯ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕ್ರೀಡಾಂಗಣ ದುರಸ್ತಿ ಹಾಗೂ ಗ್ಯಾಲರಿಯನ್ನು ನಿರ್ಮಿಸಲಾಗುವದು, ಇದರೊಂದಿಗೆ ಕುಲ್ಲೇಟಿರ ಕುಟುಂಬ ಕಳೆದ ಮೂರು ವರ್ಷದಿಂದಲೇ ಹಾಕಿ ಉತ್ಸವಕ್ಕಾಗಿ ಹಣ ಕ್ರೋಢೀಕರಿಸುತ್ತಿದ್ದು, ಪ್ರತಿಷ್ಠಿತ ಸಂಸ್ಥೆಗಳ ಪ್ರಾಯೋಜ ಕತ್ವವನ್ನೂ ಪಡೆಯುವ ಪ್ರಯತ್ನ ನಡೆದಿದೆ.

ಕುಲ್ಲೇಟಿರ ಕುಟುಂಬಸ್ಥರು ಹಾಕಿ ಉತ್ಸವದ ಜನಪ್ರಿಯತೆ ಹಾಗೂ ಇನ್ನಷ್ಟು ತಂಡಗಳು ಪಾಲ್ಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಇದೇ ಪ್ರಥಮ ಬಾರಿಗೆ ರೋಡ್ ಶೋ ಮೂಲಕವೂ ಪ್ರಯತ್ನ ನಡೆಸಿದ್ದು, ಜಿಲ್ಲೆಯ ಹಲವೆಡೆ ಜಾಥಾಗಳನ್ನು ನಡೆಸಲಾಗಿದೆ. ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಈ ಬಾರಿಯ ಆಯೋಜಕರಾಗಿರುವ ಕುಲ್ಲೇಟಿರ ಕುಟುಂಬ ಮೂರು ಬಾರಿ ಚಾಂಪಿಯನ್ ಆಗಿದೆ. 1998ರಲ್ಲಿ ನಡೆದ ಕೋಡಿರ ಕಪ್, 1999ರಲ್ಲಿ ಕಾಕೋಟುಪರಂಬುವಿನಲ್ಲಿ ನಡೆದ ಬಲ್ಲಚಂಡ ಕಪ್‍ನಲ್ಲಿ ಕೂತಂಡ ಕುಟುಂಬದೊಂದಿಗೆ ಜಂಟಿ ವಿಜೇತ ಹಾಗೂ 2002ರಲ್ಲಿ ಹುದಿಕೇರಿಯಲ್ಲಿ ನಡೆದ ಚೆಕ್ಕೇರ ಕಪ್‍ನಲ್ಲಿ ಪ್ರಶಸ್ತಿ ಗಳಿಸಿದೆ. ಅಮ್ಮತ್ತಿಯಲ್ಲಿ ನಡೆದ ನೆಲ್ಲಮಕ್ಕಡ ಕಪ್‍ನಲ್ಲಿ ಮೂರನೇ ಸ್ಥಾನ ಪಡೆದಿರುವ ತಂಡ ಈತನಕ ಮೂರು ಬಾರಿ ಸೆಮಿಫೈನಲ್ ಅನ್ನು ಪ್ರವೇಶಿಸಿದೆ.

ಕುಲ್ಲೇಟಿರ ಕುಟುಂಬದ ಅಂತರರಾಷ್ಟ್ರೀಯ ಹಾಕಿ ಆಟಗಾರ ಉತ್ತಯ್ಯ ಕೊಡವ ಜನಾಂಗದಲ್ಲಿ ಪ್ರಥಮ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿರುವವರು. ಸುಮಾರು 30 ಮಂದಿ ಭಾರತೀಯ ಸೇನೆಯಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಕುಟುಂಬದ ಪೊನ್ನಣ್ಣ - ಮಾಣಿಚ್ಚ ಅವರು ವೀರತ್ವಕ್ಕೆ ಹೆಸರಾಗಿದ್ದು, ಇವರು ಟಿಪ್ಪು ಸೈನಿಕರ ವಿರುದ್ಧ ಒಡಿಕತ್ತಿ ಮೂಲಕ ಹೋರಾಡಿ ಗೆಲವು ಸಾಧಿಸಿದ್ದರು.

ಈ ಕಾರಣದಿಂದಾಗಿ ಉತ್ಸವದಲ್ಲಿ ಭಾಗಿಯಾಗುವ ಪ್ರತಿ ತಂಡಗಳಿಗೆ ಒಡಿಕತ್ತಿಯನ್ನು ಸ್ಮರಣೀಯವಾಗಿ ನೀಡಲಾಗುತ್ತಿದೆ ಎಂದು ಹಾಕಿ ಉತ್ಸವ ಹಾಗೂ ಕುಟುಂಬದ ಬಗ್ಗೆ ಕುಲ್ಲೇಟಿರ ಅರುಣ್ ಬೇಬ ಹಾಗೂ ಅಜಿತ್ ನಾಣಯ್ಯ ಮಾಹಿತಿ ನೀಡಿದರು.