ಸೋಮವಾರಪೇಟೆ, ಏ. 4: ಸಾಮಾಜಿಕ ಅಭಿವೃದ್ಧಿ ಕಾರ್ಯಗಳಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅಗತ್ಯ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಜನಧ್ವನಿ ವೇದಿಕೆಯಿಂದ ಇಲ್ಲಿನ ಕ್ಲಬ್‍ರಸ್ತೆಯ ಕಟ್ಟಡದಲ್ಲಿ ನೂತನವಾಗಿ ನಿರ್ಮಿಸಿರುವ ಸಂಘದ ಕಚೇರಿ-ಸಭಾಂಗಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಪೈಸಾರಿ ಜಾಗದ ಸಮಸ್ಯೆ ಇರುವದರಿಂದ ಹಲವಷ್ಟು ಯೋಜನೆಗಳು ಹೊರಭಾಗಕ್ಕೆ ಹೋಗಿವೆ. ಕೆಎಸ್‍ಆರ್‍ಟಿಸಿ ಬಸ್ ಡಿಪೋಗೆ ಜಾಗದ ಕೊರತೆ ಎದುರಾಗಿದ್ದರೆ, ಮಲ್ಲಳ್ಳಿ ಜಲಪಾತಕ್ಕೆ ಕೇಬಲ್ ಕಾರ್ ಅಳವಡಿಸುವ ಯೋಜನೆಗೆ ಸ್ಥಳೀಯ ಕೆಲವರು ತಡೆಯೊಡ್ಡಿದ್ದರು. ಶಾಂತಳ್ಳಿಯಲ್ಲಿ ನಿರ್ಮಿಸಬೇಕಿದ್ದ ಸೈನಿಕ ಶಾಲೆಗೂ ಪೈಸಾರಿ ಜಾಗದ ಸಮಸ್ಯೆ ಎದುರಾಯಿತು ಎಂದ ರಂಜನ್, ಕೊಡಗಿನ ಕುಶಾಲನಗರದವರೆಗೆ ರೈಲ್ವೇ ಸಂಪರ್ಕ ಬೇಕಿದೆ. ಇದಕ್ಕೂ ಕೆಲ ಪರಿಸರವಾದಿಗಳು ತಡೆಯೊಡ್ಡುತ್ತಿದ್ದಾರೆ ಎಂದರು.

ಕೂಡಿಗೆ ಬಳಿ ಮಿನಿ ಏರ್‍ಪೋರ್ಟ್ ನಿರ್ಮಾಣ ಕಾರ್ಯ ಆಗಬೇಕಿದೆ ಎಂದ ಅವರು, ಸೋಮವಾರಪೇಟೆ ತಾಲೂಕಿನಲ್ಲಿ ಪ್ರವಾಸೋದ್ಯಮಕ್ಕೆ ವಿಫಲ ಅವಕಾಶವಿದ್ದು, ಈ ನಿಟ್ಟಿನಲ್ಲಿ ಕೈಗೊಳ್ಳುವ ಯೋಜನೆಗಳಿಗೆ ಸ್ಥಳೀಯರ ಸಹಕಾರ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಕೀಲರ ಸಂಘದ ಅಧ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿ, ಸೋಮವಾರಪೇಟೆಯಲ್ಲಿ 70ಕ್ಕೂ ಅಧಿಕ ಸಂಘ ಸಂಸ್ಥೆಗಳಿದ್ದರೂ ಪಟ್ಟಣದ ಸಮಸ್ಯೆ, ಅಭಿವೃದ್ಧಿ ಪರ ಚಿಂತಿಸುವ ಸಂಘಟನೆಗಳ ಕೊರತೆ ಎದುರಾಗಿದೆ. ಒಂದೊಂದು ಸಂಘಟನೆಯೂ ಒಂದೊಂದು ಸಮಸ್ಯೆಯ ವಿರುದ್ಧ ಗಮನಸೆಳೆದಿದ್ದೇ ಆಗಿದ್ದಲ್ಲಿ ಪಟ್ಟಣ ಹೆಚ್ಚಿನ ಅಭಿವೃದ್ಧಿ ಸಾಧಿಸುತ್ತಿತ್ತು. ಸಂಘಟನೆಗಳು ತಮ್ಮ ಸಂಕುಚಿತ ಮನೋಭಾವನೆಯನ್ನು ಬಿಟ್ಟು ಒಗ್ಗಟ್ಟಾಗಿ ಪಟ್ಟಣದ ಅಭಿವೃದ್ಧಿಗೆ ಚಿಂತನೆ ನಡೆಸಬೇಕು ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ಮಾತನಾಡಿ, ಪಟ್ಟಣ ಪಂಚಾಯಿತಿಯ ಗಡಿ ವಿಸ್ತರಣಾ ಕಾರ್ಯ ನೆನೆಗುದಿಗೆ ಬಿದ್ದಿದೆ. ಅಭಿವೃದ್ಧಿ ಕಾರ್ಯಗಳಿಗೆ ಕೆಲ ಮಂದಿ ನಿರಂತರ ಅಡ್ಡಗಾಲು ಹಾಕುತ್ತಿದ್ದಾರೆ. ಇದೇ ಕಾರಣಕ್ಕಾಗಿ ಟರ್ಫ್ ಕಾಮಗಾರಿ ವಿಳಂಬವಾಗಿದೆ. ಪ.ಪಂ.ನ ಕಸ ವಿಲೇವಾರಿ ಸಮಸ್ಯೆ, ಬಸ್ ಡಿಪೋ ಸೇರಿದಂತೆ ಇನ್ನಿತರ ಯೋಜನೆಗಳು ಮೂಲೆಗೆ ಸರಿದಿವೆ ಎಂದರು.

ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್ ಮಾತನಾಡಿ, ಗಡಿ ವಿಸ್ತರಣಾ ಕಾರ್ಯಕ್ಕೆ ಪ.ಪಂ. ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ವ್ಯವಹರಿಸಲಾಗುವದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಧ್ವನಿ ವೇದಿಕೆ ಅಧ್ಯಕ್ಷ ಸಿ.ಡಿ. ನೆಹರು ವಹಿಸಿದ್ದರು. ಜನಧ್ವನಿ ವೇದಿಕೆಯ ಸ್ಥಾಪಕಾಧ್ಯಕ್ಷ ಮನುಕುಮಾರ್ ರೈ ಅವರು ಪ್ರಸ್ತಾವಿಕ ನುಡಿಗಳನ್ನಾಡಿದರು.

ರಾಮ ಕಾಂಪ್ಲೆಕ್ಸ್‍ನ ಮಾಲೀಕ ವೀರಪ್ಪ ಅವರು ಸಂಘದ ನೂತನ ಕಟ್ಟಡ ಮತ್ತು ಸಭಾಂಗಣವನ್ನು ಉದ್ಘಾಟಿಸಿದರು. ವೇದಿಕೆಯ ಎಸ್.ಆರ್. ಸೋಮೇಶ್, ಪ್ರಸನ್ನ ನಾಯರ್, ಶ್ರೀಕಾಂತ್ ಸೇರಿದಂತೆ ಸದಸ್ಯರುಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.