ಮಡಿಕೇರಿ, ಏ. 4: ಬರುವ ಮೇ 12 ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆ, ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 64 ಮತಗಟ್ಟೆ ಕ್ಷೇತ್ರಗಳಿಗೆ ದೂರವಾಣಿ ಸಂಪರ್ಕದ ಕೊರತೆ ಇದೆ ಎಂದು ಜಿಲ್ಲಾ ದೂರವಾಣಿ ವ್ಯವಸ್ಥಾಪಕ ಸುಬ್ಬಯ್ಯ ಅವರು ಖಚಿತಪಡಿಸಿದ್ದಾರೆ.

ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು, ಈಗಾಗಲೇ ಎಲ್ಲ ಮತಗಟ್ಟೆಗಳಿಗೆ ದೂರವಾಣಿ ವ್ಯವಸ್ಥೆ ಕಲ್ಪಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಅವರು, ಎರಡು ವಿಧಾನಸಭಾ ಕ್ಷೇತ್ರಗಳ ಒಟ್ಟು 538 ಈವರೆಗಿನ ಮತಗಟ್ಟೆಗಳ ಪೈಕಿ 64 ಮತಗಟ್ಟೆಗಳಿಗೆ ದೂರವಾಣಿ ಕಲ್ಪಿಸಬೇಕಿದೆ.

ಈ ಸಂಬಂಧ ಸಂಬಂಧಿಸಿದ ಮತಗಟ್ಟೆಗಳ ಪರಿಶೀಲನೆಗಾಗಿ ಬಿ.ಎಸ್.ಎನ್.ಎಲ್. ಉದ್ಯೋಗಿಗಳು ಖುದ್ದು ಪರಿಶೀಲನೆಗೆ ತೆರಳಿದ್ದು, ಸಾಧ್ಯವಿರುವ ಕಡೆಗಳಲ್ಲಿ ಚುನಾವಣೆ ವೇಳೆ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವದು ಎಂದು ವಿವರಿಸಿದರು. ಅಲ್ಲದೆ ಅನಿವಾರ್ಯವಾದರೆ ಮೊಬೈಲ್ ವ್ಯವಸ್ಥೆ ರೂಪಿಸಲಾಗುವದಲ್ಲದೆ, ಯಾವದೂ ಸಾಧ್ಯವಾಗದಿದ್ದರೆ ಅಂತಹ ಕಡೆಗಳಲ್ಲಿ ಪೊಲೀಸ್ ಇಲಾಖೆ ವಯರ್‍ಲೆಸ್ ಕಂಟ್ರೋಲ್ ಜಾರಿಗೊಳಿಸಲು ಸಹಕರಿಸಲಿದ್ದಾರೆ ಎಂದರು. ಈ ಬಗ್ಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ 56 ಗ್ರಾಮೀಣ ಮತಗಟ್ಟೆ ಕೇಂದ್ರಗಳು ಹಾಗೂ ವೀರಾಜಪೇಟೆ ಕ್ಷೇತ್ರದ 8 ಮತಗಟ್ಟೆಗಳಿಗೆ ವ್ಯವಸ್ಥೆ ಅಗತ್ಯ ಎಂದು ತಿಳಿಸಿದರು.