ಗೋಣಿಕೊಪ್ಪಲು,ಏ.4: ದಕ್ಷಿಣಕೊಡಗಿನಲ್ಲಿ ನಿರಂತರ ಹುಲಿ ಹಾವಳಿಯಾಗುತ್ತಿದ್ದು, ರೈತರ ಕೊಟ್ಟಿಗೆಯಲ್ಲಿರುವ ಹಸುಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದು ರೈತ ಕಂಗಾಲಾಗಿದ್ದಾನೆ.
ಕಳೆದ ಒಂದು ತಿಂಗಳಿನಿಂದ ಹುಲಿ ಧಾಳಿ ನಡೆಸಿದ ಸ್ಥಳಗಳಲ್ಲಿ ಅರಣ್ಯ ಇಲಾಖೆ ಬೋನನ್ನುಇಟ್ಟು ಹುಲಿ ಸೆರೆ ಹಿಡಿಯುವ ಪ್ರಯತ್ನ ನಡೆಸಿದೆಯಾದರೂ ಇಲ್ಲಿಯತನಕ ಹುಲಿಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ. ಕೂಡಲೇ ರೈತರಿಗೆ ಪರಿಹಾರ ವಿತರಿಸುವಂತೆ ಹಾಗೂ ಹುಲಿ ಸೆರೆ ಹಿಡಿಯುವಂತೆ ಒತ್ತಾಯಿಸಿ ತಿತಿಮತಿ ಅರಣ್ಯ ಇಲಾಖಾ ಕಚೇರಿಯ ಮುಂದೆ ಜೆ.ಡಿ.ಎಸ್ ಪಕ್ಷದ ಮುಂದಾಳತ್ವದಲ್ಲಿ ತಾ. 6 ರಂದು ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಇಲಾಖಾ ಅಧಿಕಾರಿಗಳ ಗಮನ ಸೆಳೆಯಲಾಗುವದು ಎಂದು ಸಂಕೇತ್ ಪೂವಯ್ಯ ತಿಳಿಸಿದರು.
ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟಗೇರಿ ಗ್ರಾಮದ ಮಾಪಂಗಡ ಮುದ್ದಯ್ಯನವರ ಕೊಟ್ಟಿಗೆಗೆ ಭೇಟಿ ನೀಡಿದ ಸಂಕೇತ್ ಪೂವಯ್ಯ ಹುಲಿ ಧಾಳಿಯಿಂದ ಕಳೆದ ನಾಲ್ಕು ದಿನಗಳ ಹಿಂದೆ ಹಸುವನ್ನು ಕಳೆದುಕೊಂಡ ಮುದ್ದಯ್ಯನವರಿಗೆ ವೈಯಕ್ತಿಕವಾಗಿ ಹತ್ತು ಸಾವಿರ ಸಹಾಯ ಧನ ವಿತರಿಸಿದರು.
ಮಾಪಂಗಡ ಮುದ್ದಯ್ಯನವರ ಕೊಟ್ಟಿಗೆಯಲ್ಲಿದ್ದ ಮೂರು ಹಸುಗಳನ್ನು ಬಲಿ ತೆಗೆದುಕೊಂಡಿದೆ. ಈ ಭಾಗದಲ್ಲಿ ಕಳೆದ ಒಂದೂವರೆ ವರ್ಷದಿಂದ ಹುಲಿಯ ಸಂಚಾರವಿದ್ದರೂ ಇಲಾಖೆ ಈ ಬಗ್ಗೆ ಕ್ರಮವಹಿಸುತ್ತಿಲ್ಲ, ತೋಟಗಳಿಗೆ ಕಾರ್ಮಿಕರು ಆಗಮಿಸಲು ಭಯದ ವಾತವರಣವಿದೆ.ಇಲಾಖೆಯು ರೈತರ ಸಮಸ್ಯೆಗೆ ಸ್ಪಂದಿಸುತಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭ ಜೆಡಿಎಸ್ ನ ಬಾಳೆಲೆ ಹೋಬಳಿ ಅಧ್ಯಕ್ಷ ಗಾಡಂಗಡ ಸಜು ಮೊಣ್ಣಪ್ಪ, ಜಿಲ್ಲಾ ಕೃಷಿ ಘಟಕದ ಅಧ್ಯಕ್ಷ ಮಚ್ಚಮಾಡ ಮಾಚಯ್ಯ, ಕ್ಷೇತ್ರ ಅಧ್ಯಕ್ಷ ಎಂ.ಹೆಚ್ ಮತೀನ್, ಯುವ ಜೆ.ಡಿ.ಎಸ್. ಅಧ್ಯಕ್ಷ ಅಮ್ಮಂಡ ವಿವೇಕ್, ಮುಖಂಡರಾದ ಮಾಚಂಗಡ ಸುಬ್ಬಯ್ಯ, ಎಂ.ಜೆ. ಅಪ್ಪಣ್ಣ, ಅಡ್ಡೇಂಗಡ ಸುಬ್ಬಯ್ಯ, ಅಳಮೇಂಗಡ ಸತೀಶ್‍ಕಾರ್ಯಪ್ಪ, ಮಾಪಂಗಡ ಮುದ್ದಯ್ಯ, ಅಕ್ಬರ್ ಪಾಷ, ಮಲ್ಚಿರದೇವಯ್ಯ, ಬಿ.ಎಸ್ ಶಶಿ, ಸಿ.ಎಸ್ ಮೊಣ್ಣಪ್ಪ, ರಘು, ಜ್ಯೋತಿ ಬಿ.ಎಸ್. ಹಾಜರಿದ್ದರು.