ಗುಡ್ಡೆಹೊಸೂರು, ಏ. 4: ನಂಜರಾಯಪಟ್ಟಣ ಹಾಗೂ ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ಕೆಲವೆಡೆಗಳಲ್ಲಿ ದುಬಾರೆ ಪ್ರವಾಸಿ ತಾಣವೂ ಸೇರಿದಂತೆ ನಡೆಯುತ್ತಿದ್ದ ರ್ಯಾಫ್ಟಿಂಗ್ ಚಟುವಟಿಕೆಯನ್ನು ಮುಂದುವರಿಸಲು ಜಿಲ್ಲಾಡಳಿತ ಮರು ಅವಕಾಶ ಕಲ್ಪಿಸಬೇಕೆಂದು ರ್ಯಾಫ್ಟಿಂಗ್ ಅಸೋಸಿಯೇಶನ್ ಅಧ್ಯಕ್ಷ ಕೃಷ್ಣಪ್ಪ ಹಾಗೂ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರುಗಳು, ರ್ಯಾಫ್ಟಿಂಗ್ ಉದ್ದಿಮೆಯಿಂದ ದುಬಾರೆ ಸುತ್ತಮುತ್ತಲಿನ ನೂರಾರು ಗಿರಿಜನರ ಸಹಿತ ಬಡ ಕುಟುಂಬಗಳು ಬದುಕು ಕಂಡುಕೊಂಡಿದ್ದಾಗಿ ನೆನಪಿಸಿದ್ದಾರೆ. ಅಲ್ಲದೆ, ಪ್ರವಾಸಿಯೊಬ್ಬರ ಸಾವಿಗೆ ಕಾರಣರಾದವರಿಗೆ ಕಾನೂನಿನಡಿ ಶಿಕ್ಷೆಗೆ ಗುರಿಪಡಿಸಲಾಗಿದೆ ಎಂದು ಗಮನ ಸೆಳೆದಿದ್ದಾರೆ.

ಹೀಗಿರುವಾಗ ಕಳೆದ ಸುಮಾರು ಎರಡು ದಶಕದಿಂದ ದುಬಾರೆ ಸುತ್ತಮುತ್ತಲಿನ ಜನತೆ ಬದುಕು ಕಂಡುಕೊಂಡಿದ್ದ ರ್ಯಾಫ್ಟಿಂಗ್ ಅನ್ನು ನಿಷೇಧಿಸಿರುವದು ಸರಿಯಲ್ಲವೆಂದು ಅಭಿಪ್ರಾಯಪಟ್ಟಿದ್ದು, ತಕ್ಷಣವೇ ಜಿಲ್ಲಾಧಿಕಾರಿಗಳು ರ್ಯಾಫ್ಟಿಂಗ್ ಚಟುವಟಿಕೆ ನಿಷೇಧ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.

ಆ ಮುಖಾಂತರ ಬಡ ಕುಟುಂಬಗಳ ಜೀವನ ನಿರ್ವಹಣೆಗೆ ತೊಂದರೆ ತಪ್ಪಿಸಿ, ಕಾನೂನಿನ ವ್ಯಾಪ್ತಿಯಲ್ಲಿ ಪ್ರವಾಸಿ ಕೇಂದ್ರದಲ್ಲಿ ನಡೆಯುವ ಚಟುವಟಿಕೆಗಳನ್ನು ಮುಂದುವರಿಸಲು ಮಾತುಕತೆ ನಡೆಸಿ, ನ್ಯಾಯ ದೊರಕಿಸಬೇಕೆಂದು ಪತ್ರಿಕಾ ಹೇಳಿಕೆಯೊಂದಿಗೆ ಒತ್ತಾಯಿಸಿದ್ದಾರೆ.

-ಗಣೇಶ್ ಕುಡೆಕಲ್.