ಸೋಮವಾರಪೇಟೆ,ಏ.5: ಕೃಷಿ ಭೂಮಿಯ ಪರಿವರ್ತನೆಗೆ ಕಡಿವಾಣ ಹಾಕಿದರೆ ಮಾತ್ರ ಹಸಿರುಕ್ರಾಂತಿಗೆ ಅರ್ಥ ಬರುತ್ತದೆ. ಆ ಮೂಲಕ ಬಾಬು ಜಗಜೀವನ್ ರಾಂ ಅವರ ಕನಸು ನನಸಾಗುತ್ತದೆ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ. ಚಿಟ್ಟಿಯಪ್ಪ ಅಭಿಪ್ರಾಯಿಸಿದರು.

ತಾಲೂಕು ಆಡಳಿತ, ತಾ.ಪಂ., ಪ.ಪಂ. ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಇಲ್ಲಿನ ಸ್ತ್ರೀಶಕ್ತಿ ಭವನದಲ್ಲಿ ಆಯೋಜಿಸಲಾಗಿದ್ದ ಬಾಬು ಜಗಜೀವನ್‍ರಾಂ ಅವರ 111ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಗಜೀವನ್ ರಾಂ ಅವರು ದೇಶದಲ್ಲಿ ಹಸಿವು ನೀಗಿಸಲು ಕ್ರಾಂತಿಯನ್ನೇ ಮಾಡಿದರು. ನೀರಾವರಿಗೆ ಒತ್ತು ನೀಡುವ ಮೂಲಕ ಹಸಿರು ಕ್ರಾಂತಿಗೆ ನಾಂದಿ ಹಾಡಿದರು. ಇಂದಿನ ದಿನಗಳಲ್ಲಿ ಕೃಷಿ ಭೂಮಿ ಪರಿವರ್ತನೆಗೊಂಡು ಕಾಂಕ್ರೀಟ್ ಪಟ್ಟಣ ಆಗುತ್ತಿದೆ. ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುವ ಹಂತ ತಲುಪಿದೆ. ಇದು ಬದಲಾಗಬೇಕಾದರೆ ಕೃಷಿ ಭೂಮಿಯನ್ನು ಇತರ ಉದ್ದೇಶಗಳಿಗೆ ಪರಿವರ್ತನೆ ಮಾಡುವದು ನಿಲ್ಲಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ತಹಶೀಲ್ದಾರ್ ವೀರೇಂದ್ರ ಬಾಡಕರ್ ಮಾತನಾಡಿ, ಕೃಷಿ ಕ್ಷೇತ್ರಕ್ಕೆ ಜಗಜೀವನ್ ರಾಂ ಅವರು ನೀಡಿದ ಕೊಡುಗೆ ಅಪಾರ ಎಂದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ಚಿಕ್ಕಬಸವಯ್ಯ ಮಾತನಾಡಿ, ಕೃಷಿಯೊಂದಿಗೆ ಕಾರ್ಮಿಕರ ಕಲ್ಯಾಣಕ್ಕೂ ಒತ್ತು ನೀಡುವ ಮೂಲಕ ಮಹಾತ್ಮರು ನಿತ್ಯಸ್ಮರಣೀಯರಾಗಿದ್ದಾರೆ ಎಂದು ಬಣ್ಣಿಸಿದರು.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾಧಿಕಾರಿ ಸ್ವಾಮಿ ಮಾತನಾಡಿ, ಇಂತಹ ಮಹಾನ್ ಚೇತನಗಳ ಜೀವನವೇ ಒಂದು ಪಾಠ. ಇವರುಗಳ ತತ್ವಾದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶೀಲಾ ಪ್ರಾರ್ಥಿಸಿ, ತಾಲೂಕು ಕಚೇರಿಯ ಅರುಣ್‍ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.