ಸಿದ್ದಾಪುರ, ಏ. 5: ದಕ್ಷಿಣ ಕೊಡಗಿನ ಕೊಟ್ಟಗೇರಿ ಗ್ರಾಮದಲ್ಲಿ ನಿರಂತರ ಹುಲಿ ಧಾಳಿ ನಡೆಸಿ ಜಾನುವಾರುಗಳನ್ನು ಸಾಯಿಸುತ್ತಿರುವ ಹಿನ್ನೆಲೆಯಲ್ಲಿ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿದ್ಧತೆ ಕೈಗೊಂಡಿದೆ. ಕಳೆದ ಕೆಲವು ತಿಂಗಳಿನಿಂದ ಬಾಳೆಲೆ ವ್ಯಾಪ್ತಿಯ ಕೊಟ್ಟಗೇರಿಯಲ್ಲಿ ಹಲವಾರು ರೈತರ ಜಾನುವಾರುಗಳನ್ನು ಸಾಯಿಸಿ ವ್ಯಾಘ್ರ ಅಟ್ಟಹಾಸ ಮೆರೆಯುತ್ತಿತ್ತು. ಕೆಲವು ರೈತರ ಕೊಟ್ಟಿಗೆಯಲ್ಲಿದ್ದ ಜಾನುವಾರುಗಳ ಮೇಲೆ ಧಾಳಿ ನಡೆಸಿ ಸಾಯಿಸಿದ ಘಟನೆಯಿಂದಾಗಿ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟಗೇರಿ ಗ್ರಾಮಸ್ಥರು ಜಾನುವಾರುಗಳನ್ನು ಕಳೆದುಕೊಂಡು ಭಯಭೀತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೊಟ್ಟಗೇರಿಯ ಕಾಫಿ ತೋಟದೊಳಗೆ 13 ಟ್ರಾಪ್ ಕ್ಯಾಮರಾಗಳನ್ನು ಅಳವಡಿಸಿದ್ದು, ಹುಲಿಯ ಚಲನವಲನ ಕಂಡು ಹಿಡಿದ ಬಳಿಕ ಶನಿವಾರದಂದು ಕಾರ್ಯಾಚರಣೆ ನಡೆಸುವ ಮೂಲಕ ಹುಲಿಯನ್ನು ಸೆರೆ ಹಿಡಿಯಲು ಸಿದ್ಧತೆ ಕೈಗೊಂಡಿದ್ದಾರೆ. ಈಗಾಗಲೇ ಕಾಫಿ ತೋಟದೊಳಗೆ ಬೋನ್ ಕೂಡಾ ಇರಿಸಲಾಗಿದೆ. ವೀರಾಜಪೇಟೆ ಡಿ. ಸಿ.ಎಫ್ ಮರಿಯ ಕ್ರಿಸ್ತು ರಾಜ್ ನೇತೃತ್ವದಲ್ಲಿ ಎ.ಸಿ.ಎಫ್. ಶ್ರೀಪತಿ, ಆರ್.ಎಫ್.ಓ. ಅಶೋಕ್ ಹಾಗೂ ಸಿಬ್ಬಂದಿಗಳು ಈ ಕ್ರಮ ಕೈಗೊಂಡಿದ್ದಾರೆ.