ನಾಪೆÇೀಕ್ಲು, ಏ. 5: ಸುಮಾರು 250 ವರ್ಷಗಳ ಹಿಂದೆ ಪಾಳು ಬಿದ್ದಿದ್ದ ದೇವಾಲಯವೊಂದು ಗ್ರಾಮಸ್ಥರು, ಭಕ್ತಾದಿಗಳ ಧನ ಸಹಾಯ ಮತ್ತು ಸತತ ಪ್ರಯತ್ನದ ಫಲವಾಗಿ ಸುಂದರವಾಗಿ ರೂಪುಗೊಂಡಿದೆ. ಕುಂಜಿಲ ಗ್ರಾಮದ ಮೂರು ಕೇರಿ ಮತ್ತು ಸಮೀಪದ ನಾಲಡಿ ಗ್ರಾಮದ ಒಂದು ಕೇರಿಯ ಜನ ಸೇರಿ ಈ ದೇವಾಲಯವನ್ನು ನಡೆಸಿಕೊಂಡು ಬರುತ್ತಿರುವದರಿಂದ ಇದಕ್ಕೆ ನಾಲ್ಕೇರಿ ಶ್ರೀ ಭಗವತಿ ದೇವಾಲಯ ಎಂಬ ಹೆಸರು ಪ್ರಚಲಿತದಲ್ಲಿದೆ.

ಸುಮಾರು 250 ವರ್ಷಗಳ ಹಿಂದೆ ಈ ದೇವಸ್ಥಾನದಲ್ಲಿ ನಿತ್ಯ ಪೂಜೆ ಮತ್ತು ಉತ್ಸವಾದಿಗಳು ನಡೆಯುತ್ತಿತ್ತು. ಆದರೆ ಗ್ರಾಮಸ್ಥರ ಒಳ ಜಗಳದ ಮತ್ತು ವೈಷಮ್ಯದ ಕಾರಣದಿಂದ ವಾರ್ಷಿಕ ಹಬ್ಬದಂದು ಶ್ರೀ ಭಗವತಿ ದೇವರ ಉತ್ಸವ ಮೂರ್ತಿಯನ್ನು ಶ್ರೀ ಪಾಡಿ ಇಗ್ಗುತ್ತಪ್ಪ ದೇವಸ್ಥಾನಕ್ಕೆ ಸ್ಥಳಾಂತರಿಸಿದ ಸಂದರ್ಭದಲ್ಲಿ ಅರ್ಚಕರು ಶ್ರೀ ದೇವಿಯ ಮೂರ್ತಿಯನ್ನು ಇಗ್ಗುತ್ತಪ್ಪ ದೇವಸ್ಥಾನದಲ್ಲಿಯೇ ಇರಿಸಿದರೆಂಬದು ಪ್ರತೀತಿ.

ಆಗ ಇಗ್ಗುತ್ತಪ್ಪ ದೇವಾಲಯದ ಆಡಳಿತವನ್ನು ಗ್ರಾಮಸ್ಥರು ನಡೆಸುತ್ತಿದ್ದುದರಿಂದ ದೇವಿಯ ವಿಗ್ರಹವನ್ನು ಅಲ್ಲಿಯೇ ಇರಿಸಿ ಪೂಜಿಸಲಾಯಿತು. ಅನಂತರ ಈ ದೇವಾಲಯ ಪೂರ್ತಿಯಾಗಿ ಕಾಡು ಪಾಲಾಯಿತು. 1996ರಲ್ಲಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಅಷ್ಟಬಂಧ ಬ್ರಹ್ಮಕಲಶ ನೆರವೇರಿಸುವ ಸಂದರ್ಭದಲ್ಲಿ ಭಗವತಿ ದೇವಿಯ ಮೂರ್ತಿಯನ್ನು ಹೊರಗಿಡಲಾಯಿತು.

ಅದಾಗಲೇ ಭಗವತಿ ದೇವಸ್ಥಾನ ಪಾಳುಬಿದ್ದ ಸ್ಥಳದಲ್ಲಿ ಬೃಹತ್ ವೃಕ್ಷಗಳು ಬೆಳೆದು ನಿಂತು ದೇವಸ್ಥಾನ ಇದ್ದುದಕ್ಕೆ ಕುರುಹು ಮಾತ್ರ ಇತ್ತು. ಆಗ ಗ್ರಾಮದ ಹಿರಿಯರಾದ ಕೆ.ಕೆ.ಮುತ್ತಪ್ಪ ಹೆಚ್ಚಿನ ಆಸಕ್ತಿ ವಹಿಸಿ ತಕ್ಕ ಮುಖ್ಯಸ್ಥರನ್ನು, ಗ್ರಾಮಸ್ಥರನ್ನು ಒಗ್ಗೂಡಿಸಿ ದೇವಾಲಯದ ಪುನರ್ ನಿರ್ಮಾಣಕ್ಕೆ ಚಾಲನೆ ನೀಡಿದರು.

ಅನಂತರ ಹಣಕಾಸಿನ ತೊಂದರೆಯಿಂದ ಹಲವು ಏಳು ಬೀಳುಗಳ ನಡುವೆ 2010ರ ಮೇ ತಿಂಗಳಲ್ಲಿ ದೇವಿಯ ಪ್ರತಿಷ್ಠಾಪನಾ ಮಹೋತ್ಸವವನ್ನು ನೆರವೇರಿಸಲಾಯಿತು. ಆದರೆ ದೇವಳದ ಪೌಳಿ ಮತ್ತಿತರ ಕೆಲಸಗಳು ಹಾಗೇ ಉಳಿದಿದ್ದವು. ಅನಂತರದ ನಾಲ್ಕು ವರ್ಷಗಳ ಗ್ರಾಮಸ್ಥರ ಶ್ರಮ ಮತ್ತು ದಾನಿಗಳ ಸಹಾಯದಿಂದ ಇದೀಗ ವಿಶಾಲವಾದ ಸುಂದರ ದೇವಾಲಯ ನಿರ್ಮಾಣಗೊಂಡಿದೆ.

ಈ ದೇವಾಲಯವು ಕೇರಳ ಶೈಲಿಯ ವಾಸ್ತುಶಿಲ್ಪವನ್ನು ಒಳಗೊಂಡಿದೆ. ದೊಡ್ಡ ಗರ್ಭಗುಡಿ ಅದಕ್ಕೆ ತಕ್ಕನಾದ ತೀರ್ಥ ಮಂಟಪ, ವಿಶಾಲವಾದ ಒಳ ಮತ್ತು ಹೊರಾಂಗಣ ಹೊಂದಿದೆ. ದೇವಾಲಯ ನಿರ್ಮಾಣಕ್ಕೆ ಈಗಾಗಲೇ ಸುಮಾರು 25 ಲಕ್ಷ ರೂ. ವೆಚ್ಚವಾಗಿದೆ. ಅದರಲ್ಲಿ ಮುಜರಾಯಿ ಇಲಾಖೆಯಿಂದ 50 ಸಾವಿರ ರೂ. ಸಮುದಾಯ ಭವನ ನಿರ್ಮಾಣಕ್ಕೆ ಸಂಸದರ ನಿಧಿಯಿಂದ 2.50 ಲಕ್ಷ ರೂ. ಹಾಗೂ ಶಾಸಕರ ನಿಧಿಯಿಂದ ಒಂದು ಲಕ್ಷ ರೂ. ಲಭಿಸಿದೆ. ಉಳಿದಂತೆ ದಾನಿಗಳು, ಗ್ರಾಮಸ್ಥರ ದೇಣಿಗೆ, ವಂತಿಗೆಯಿಂದ ಸಂಗ್ರಹಿಸಲಾಗಿದೆ. ಇನ್ನೂ ಕೆಲಸ ಬಾಕಿಯಿದ್ದು ಇದಕ್ಕೆ ನಾಡಿನ ಜನರ ಸಹಾಯ ಹಸ್ತವನ್ನು ನಿರೀಕ್ಷಿಸಲಾಗಿದೆ ಎಂದು ದೇವಳದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ‘ಶಕ್ತಿ’ ಗೆ ತಿಳಿಸಿದ್ದಾರೆ.

ವಾರ್ಷಿಕೋತ್ಸವ

ತಾ. 5ರಿಂದ ಶ್ರೀ ಭಗವತಿ ದೇವರ ವಾರ್ಷಿಕೋತ್ಸವ ಆರಂಭಗೊಂಡಿದ್ದು, 8ರವರೆಗೆ ನಡೆಯಲಿದೆ. 5ರಂದು ಸಂಜೆ ದೀಪಾರಾಧನೆ, ದೇವರ ಬಲಿ, ತಾ.6ರಂದು ಪಟ್ಟಣಿ ಹಬ್ಬ, ಅಲಂಕಾರ ಪೂಜೆ, ಮಹಾಪೂಜೆ, 7ರಂದು ದೇವಿಯ ಅವಭೃತ ಸ್ನಾನ, ನೃತ್ಯ ಬಲಿ, ವಸಂತ ಪೂಜೆ ನಡೆಯಲಿದೆ. 8ರಂದು ಶುದ್ಧ ಕಲಶದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದ್ದು, 3 ದಿನವೂ ದೇವಳದಲ್ಲಿ ಅನ್ನಸಂತರ್ಪಣೆ ನಡೆಯಲಿದೆ.

-ಪಿ.ವಿ. ಪ್ರಭಾಕರ್