ವೀರಾಜಪೇಟೆ, ಏ.5: ರಾಷ್ಟ್ರೀಯ ರಾಜಕೀಯ ಪಕ್ಷಗಳು ಜಾತಿ, ಧರ್ಮಗಳ ನಡುವೆ ವಿಷದ ಬೀಜ ಬಿತ್ತಿ ಧಾರ್ಮಿಕ ಭಾವನೆಗಳನ್ನು ಒಡೆದು ಮತಬೇಟೆಯಲ್ಲಿ ತೊಡಗಿದ್ದಾರೆ. ಈ ಪಕ್ಷಗಳಿಂದ ಜನರಿಗೆ ಯಾವದೇ ಪ್ರಯೋಜನವಾಗಿಲ್ಲ. ರಾಜ್ಯದಲ್ಲಿ ಮತದಾರರ ಒಲವು ಪ್ರಾದೇಶಿಕ ಪಕ್ಷದ ಮೇಲಿದ್ದು ಜನತೆ ರಾಜ್ಯದಲ್ಲಿ ಆಡಳಿತದ ಬದಲಾವಣೆ ಬಯಸಿದ್ದಾರೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ವೀರಾಜಪೇಟೆ ನಗರ ಸಮಿತಿಯಿಂದ ಇಲ್ಲಿನ ಗಾಂಧಿನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಅವರು, ಕೊಡಗಿನಲ್ಲಿ ರೈತರ ಆತ್ಮಹತ್ಯೆ, ನಿರಂತರ ಕಾಡಾನೆ ದಾಳಿಯಿಂದ ಸುಮಾರು 40ಕ್ಕೂ ಅಧಿಕ ಮಂದಿ ಸಾವು, ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಈಗಿನ ಸರಕಾರದಿಂದ ಪರಿಹಾರ ದೊರೆತಿಲ್ಲ. ಕೊಡಗಿನ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದ ಕಾಂಗ್ರೆಸ್ ಸರಕಾರವನ್ನು ಜನತೆ ಕಿತ್ತೊಗೆಯಲು ಮುಂದಾಗಿದ್ದಾರೆ. ಕೇಂದ್ರದಲ್ಲಿ ಭಾರತೀಯ ಜನತಾ ಪಾರ್ಟಿಯ ಚುನಾವಣಾ ಸಮಯದಲ್ಲಿ ನೀಡಿದ ಎಲ್ಲ ಪ್ರಣಾಳಿಕೆಗಳನ್ನು ಗಾಳಿಗೆ ತೂರಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೋಟುಗಳ ಅಪಮೌಲ್ಯದಿಂದ ಇಂದು ಸಾಮಾನ್ಯ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಈ ಎರಡೂ ರಾಷ್ಟ್ರೀಯ ಪಕ್ಷಗಳು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಮೈಲಿಗೆ ಮಾಡಲು ಮುಂದಾಗಿವೆಯೇ ಹೊರತು ಜನರ ಹಿತ, ಬೇಕು ಬೇಡಿಕೆಗಳು, ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲಗೊಂಡಿವೆ. ಇದರಿಂದ ಜನತೆ ಬೇಸತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಕೇವಲ 20 ತಿಂಗಳ ಅಧಿಕಾರವನ್ನು ಮೆಲುಕು ಹಾಕಿದರೆ ಈಗಲೂ ಜೆಡಿಎಸ್ ಸರಕಾರದ ಸಾಧನೆಗಳು ಜನತೆ ಸ್ಮರಿಸುವಂತಾಗಿದೆ. ಎಂದರು.

ಕಳೆದ ನಾಲ್ಕು ದಶಕಗಳಿಂದಲೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಫರ್ಧಿಸಲು ಸ್ಥಳೀಯರಿಗೆ ಅವಕಾಶ ಕೊಟ್ಟಿಲ್ಲ, ಈ ಬಾರಿ ಜೆ.ಡಿ.ಎಸ್. ಪಕ್ಷದ ವರಿಷ್ಠರು ಗಮನ ಹರಿಸಿ ಕ್ಷೇತ್ರದಿಂದ ಸ್ಪರ್ಧಿಸಲು ತನಗೆ ಟಿಕೆಟ್ ನೀಡಿದ್ದಾರೆ. ಪಕ್ಷದ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ನಿಷ್ಠೆಯಿಂದ ಕೆಲಸ ಮಾಡಿ ಈಗಾಗಲೇ ಕ್ಷೇತ್ರದ 47 ಗ್ರಾಮ ಪಂಚಾಯಿತಿಗಳ ಪೈಕಿ 40 ಪಂಚಾಯಿತಿಗಳಲ್ಲಿ ಮೊದಲನೇ ಹಂತದ ಪ್ರಚಾರ ಮುಕ್ತಾಯಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಸುಮಾರು ಎರಡು ಲಕ್ಷದ ಹನೆÀ್ನರಡು ಸಾವಿರ ಮತದಾರರ ಪೈಕಿ ಒಂದು ಲಕ್ಷದ ಹತ್ತು ಸಾವಿರ ಮತದಾರರನ್ನು ಭೇಟಿ ಮಾಡಿ ಪಕ್ಷದ ಸಾಧನೆಗಳನ್ನು ವಿವರಿಸಿ ಮತಯಾಚಿಸಿದ್ದಾರೆ. ಪಕ್ಷದ ಎರಡನೇ ಹಂತದ ಪ್ರಚಾರವನ್ನು ಸದ್ಯದಲ್ಲಿಯೇ ಕೈಗೊಳ್ಳಲಿದ್ದು, ರಾಜ್ಯದ ಆಡಳಿತದ ಸೂತ್ರ ಹಿಡಿಯಲಿರುವ ಕುಮಾರಸ್ವಾಮಿ ಅವರ ಕೈಯನ್ನು ಬಲಪಡಿಸುತ್ತೇವೆ ಎಂದು ಸಂಕೇತ್ ಪೂವಯ್ಯ ಹೇಳಿದರು.

ಕಾಫಿ ಬೆಳಗಾರರ ಒಕ್ಕೂಟ ಹಾಗೂ ಜೆಡಿಎಸ್ ಪಕ್ಷದ ಮುಖಂಡ ಅಜ್ಜಮಾಡ ಶಂಕರಿ ನಾಚಪ್ಪ ಮಾತನಾಡಿ, ತಮಿಳ್ನಾಡು ರಾಜಕೀಯ ಕ್ಷೇತ್ರದಲ್ಲಿ ಪ್ರಾದೇಶಿಕ ಪಕ್ಷ ಯಾವ ರೀತಿಯಲ್ಲಿ ಮುನ್ನಡೆ ಸಾಧಿಸಿ, ಸಾವಿನವರೆಗೂ ಜಯಲಲಿತ ಮುಖ್ಯಮಂತ್ರಿಯಾಗಿ ಜನತೆಗೆ ಅಗತ್ಯ ಸೇವೆ ಸಲ್ಲಿಸಿದನ್ನು ಕರ್ನಾಟಕದಲ್ಲಿ ಜಾತ್ಯತೀತ ಜನತಾದಳ ಮಾಡಲಿದೆ. ಇಂದಿನ ಜನಪ್ರತಿನಿಧಿಗಳಿಂದ ರೈತರು, ಬೆಳೆಗಾರರಿಗೆ ಯಾವದೇ ಪ್ರಯೋಜನವಾಗಿಲ್ಲ. ಬೆಳೆಗಾರರ ಸಮಸೆÀ್ಯಗಳಿಗೆ ಜನಪ್ರತಿನಿಧಿಗಳು ಸ್ಪಂದಿಸಿಲ್ಲವೆಂದರು.

ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಎಚ್. ಮತೀನ್ ಮಾತನಾಡಿ, ಇಂದಿನ ರಾಜಕೀಯ ವಿದ್ಯಮಾನಗಳ ಪ್ರಕಾರ ಪ್ರಾದೇಶಿಕ ಪಕ್ಷಕ್ಕೆ ಮತದಾರರ ಒಲವಿದೆ ಎಂದು ಹೇಳಿದರು. ಸಭೆಯನ್ನುದ್ದೇಶಿಸಿ ಪಕ್ಷದ ಜಿಲ್ಲಾ ಸಮಿತಿ ಘಟಕದ ಅಜ್ಜಮಾಡ ಮುತ್ತಮ್ಮ ಮಾತನಾಡಿದರು. ವೇದಿಕೆಯಲ್ಲಿ ಮಹಿಳಾ ಘಟಕದ ನಗರ ಸಮಿತಿ ಅಧ್ಯಕ್ಷೆ ಸುಮಿ, ಪರಮಾಲೆ ಗಣೇಶ್, ಕುಯ್ಮಂಡ ರಾಕೇಶ್, ಚಿಲ್ಲವಂಡ ಗಣಪತಿ, ಎಂ.ಎಂ.ಮುನ್ನಾ ಆರ್ಮುಗಂ, ನೂರ್ ಅಹಮ್ಮದ್, ಮಂಡೇಪಂಡ ಮುತ್ತಪ್ಪ, ರಂಜನ್ ನಾಯ್ಡು, ಪಿ.ನಿತೀನ್, ಸಿ.ಎ. ನಾಸರ್, ಟಿ.ಆರ್. ಹರ್ಷ ಉಪಸ್ಥಿತರಿದ್ದರು.

ತಾಲೂಕು ಯುವಕ ಘಟಕದ ತಾಲೂಕು ಸಮಿತಿ ಅಧ್ಯಕ್ಷ ಅಮ್ಮಂಡ ವಿವೇಕ್ ಸ್ವಾಗತಿಸಿದರು. ನಗರ ಸಮಿತಿ ಅಧ್ಯಕ್ಷ ಪಿ.ಎ. ಮಂಜುನಾಥ್ ನಿರೂಪಿಸಿದರು. ಸಭೆಗೆ ಮೊದಲೇ ಹಾಜರಾದ ಚುನಾವಣಾಧಿಕಾರಿ ಹೇಮ್ ಕುಮಾರ್ ಹಾಗೂ ಪೊಲೀಸ್ ಅಧಿಕಾರಿಗಳು ಸಭೆಯ ಮೇಲೆ ಹದ್ದಿನ ಕಣ್ಣಿರಿಸಿದ್ದರು.