ಶನಿವಾರಸಂತೆ, ಏ. 5: ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರ್ ಸ್ವಾಮೀಜಿ ಅವರು ಜಗತ್ತಿಗೆ ಮಾದರಿಯಾದ ಮಹಾನ್ ಪುರುಷರಾಗಿದ್ದಾರೆ ಎಂದು ಕನ್ನಡಮಠದ ಚೆನ್ನಬಸವ ದೇಶೀಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಮೀಪದ ಕೊಡ್ಲಿಪೇಟೆ ಕಲ್ಲುಮಠದ ಶಾಲಾ ಸಭಾಂಗಣದಲ್ಲಿ ಜಿಲ್ಲಾ ವೀರಶೈವ ಸಮಾಜ, ತಾಲೂಕು ಶರಣ ಸಾಹಿತ್ಯ ಪರಿಷತ್, ವೀರಶೈವ ಮಹಾಸಭಾ, ಕೊಡ್ಲಿಪೇಟೆ ವೀರಶೈವ ಸಮಾಜ, ಗಂಗಾ ವೀರಶೈವ ಸಮಾಜ ಹಾಗೂ ಗ್ರಾಮಸ್ಥರ ಸಹಭಾಗಿತ್ವದಲ್ಲಿ ನಡೆದ ಡಾ. ಶಿವಕುಮಾರ್ ಸ್ವಾಮೀಜಿ ಅವರ 111ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಡಾ. ಶಿವಕುಮಾರ್ ಸ್ವಾಮೀಜಿ ಮಾನವ ಧರ್ಮಕ್ಕೆ ಬೆಲೆ ನೀಡಿದ ಮಹಾನ್ ವ್ಯಕ್ತಿಯೂ ಆಗಿದ್ದಾರೆ. ನಿಸ್ವಾರ್ಥ ಸೇವಾ ಮನೋಭಾವ, ಆಧ್ಯಾತ್ಮಿಕ ಚಿಂತನಾ ಶಕ್ತಿ, ಸಮಾಜಮುಖಿ ಚಿಂತನೆ, ಆದರ್ಶ ಜೀವನ ಹಾಗೂ ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವದರಿಂದಲೇ 111 ವರ್ಷಗಳ ತುಂಬು ಜೀವನವನ್ನು ಆರೋಗ್ಯವಂತರಾಗಿ ಅನುಭವಿಸುತ್ತಿದ್ದಾರೆ ಎಂದರು.

ಯಡೆಹಳ್ಳಿ ಮಂಜುನಾಥ್ ಮಾತನಾಡಿ, ಡಾ. ಶಿವಕುಮಾರ್ ಸ್ವಾಮೀಜಿ ಅವರು ಶಿಕ್ಷಣ, ಆರೋಗ್ಯ ಹಾಗೂ ಸಮಾಜ ಸೇವೆಗೆ ಅಪಾರ ಕೊಡುಗೆ ನೀಡಿದ್ದಾರೆ. ಸಿದ್ಧಗಂಗಾ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ಅನೇಕರು ಉನ್ನತ ಉದ್ಯೋಗದೊಂದಿಗೆ ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದಾರೆ ಎಂದರು.

ಮುದ್ದಿನಕಟ್ಟೆ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಡಾ. ಶಿವಕುಮಾರ ಸ್ವಾಮೀಜಿಯವರ ಜೀವನ ಹಾಗೂ ಮೌಲ್ಯಗಳು ಇಂದಿನ ಯುವಜನತೆಗೆ ಮಾದರಿಯಾಗಿವೆ ಎಂದರು. ಕೆಸವತ್ತೂರು ಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಆಧ್ಯಾತ್ಮಿಕ ಹಾಗೂ ಧಾರ್ಮಿಕ ಚಿಂತನೆಯನ್ನು ಮೈಗೂಡಿಸಿಕೊಂಡು ಆರೋಗ್ಯವೇ ದೊಡ್ಡ ಸಂಪತ್ತು ಎಂದು ಭಾವಿಸಿಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಜೀವನ ಸಾಗಿಸಬಹುದು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಲ್ಲುಮಠದ ಮಹಾಂತ ಸ್ವಾಮೀಜಿ ಮಾತನಾಡಿ, ಡಾ. ಶಿವಕುಮಾರ್ ಸ್ವಾಮೀಜಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿದರು.

ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ಗುರುವಂದನಾ ಸಮಿತಿ ಸದಸ್ಯರಾದ ಭಾನುಪ್ರಕಾಶ್, ದಿವಾಕರ್, ಕೆ.ವಿ. ಮಂಜುನಾಥ್, ಕಾಂತರಾಜ್, ಪ್ರದೀಪ್, ಸೋಮಪ್ಪ, ತಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.