ಸಿದ್ದಾಪುರ, ಏ. 5: ಅನಧಿಕೃತವಾಗಿ ಕೋಳಿ ಮಾಂಸ ವ್ಯಾಪಾರ ಮಾಡುತ್ತಿದ್ದ ಮಾರಾಟಗಾರರ ಅಂಗಡಿಗಳನ್ನು ಗ್ರಾ.ಪಂ. ಮುಚ್ಚಿಸಿದೆ. ನೆಲ್ಯಹುದಿಕೇರಿ ಗ್ರಾ.ಪಂ 2018-19 ನೇ ಸಾಲಿಗೆ ಕೋಳಿ ಮಾಂಸ ಮಾರಾಟಕ್ಕೆ ಟೆಂಡರ್ ಕರೆದಿದ್ದು, ಯಾವದೇ ವ್ಯಾಪಾರಸ್ಥರು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ. ಕಳೆದ ವರ್ಷ ಪಡೆದ ಲೈಸನ್ಸ್‍ನ ಅವಧಿಯು ಮಾ.31 ಕ್ಕೆ ಮುಕ್ತಾಯಗೊಂಡಿದ್ದು, ನೂತನವಾಗಿ ಲೈಸನ್ಸ್ ಪಡೆಯದೆ ಮಾರಾಟ ಮಾಡುತ್ತಿದ್ದ ಕೋಳಿ ಮಾಂಸದ ಅಂಗಡಿಯನ್ನು ಗ್ರಾ.ಪಂ ಪಿ.ಡಿ.ಓ ಹಾಗೂ ಆಡಳಿತ ಮಂಡಳಿ ಮುಚ್ಚಿಸಿದೆ. ಈಗಾಗಲೇ ಕೋಳಿ ಮಾರಾಟದ ಲೈಸನ್ಸ್ ದರ ಹೆಚ್ಚಾಗಿರುವದಾಗಿ ನೆಲ್ಯಹುದಿಕೇರಿಯ ವ್ಯಾಪಾರಸ್ಥರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನೆಲ್ಯಹುದಿಕೇರಿಯಲ್ಲಿ ಕೋಳಿ ಮಾಂಸ ಲಭ್ಯವಿಲ್ಲದ ಕಾರಣ ಮಾಂಸಪ್ರಿಯರು ಮಾಂಸ ಖರೀದಿಸಲು ಪಕ್ಕದ ಸಿದ್ದಾಪುರ ಪಟ್ಟಣಕ್ಕೆ ತೆರಳುವಂತಾಗಿದೆ.