ಗೋಣಿಕೊಪ್ಪ ವರದಿ, ಏ. 5: ನಿಟ್ಟೂರು ಲಕ್ಷ್ಮಣತೀರ್ಥ ನದಿಗೆ ಕಟ್ಟಲಾಗುತ್ತಿರುವ ಸೇತುವೆಯ ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಬಾಳೆಲೆ, ನಿಟ್ಟೂರು, ಕಾರ್ಮಾಡು ಹಾಗೂ ಕೊಟ್ಟಗೇರಿ ಗ್ರಾಮಸ್ಥರು ಒಂದಾಗಿ ಸೇರಿ ಸೇತುವೆ ಸಮೀಪ ಪ್ರತಿಭಟನೆ ನಡೆಸಿ ಕಾಮಗಾರಿಯನ್ನು ತಡೆ ಹಿಡಿದರು.ಬಾಳೆಲೆ ಕಡೆಯಿಂದ ಬರುವಾಗ ರಸ್ತೆಯು ಸೇತುವೆಗೆ ನೇರವಾಗಿ ನಿರ್ಮಾಣವಾಗಬೇಕು. ಆದರೆ, ರಸ್ತೆಯನ್ನು ಯೂಟರ್ನ್ ಮೂಲಕ ನಿರ್ಮಿಸುವ ಮೂಲಕ ಭವಿಷ್ಯದಲ್ಲಿ ಅಪಘಾತಗಳು ಹೆಚ್ಚಾಗುವ ಸಾಧ್ಯತೆ ಬಗ್ಗೆ ಆತಂಕ ವ್ಯಕ್ತಪಡಿಸಿದರು. ನೇರವಾಗಿ ನಿರ್ಮಿಸಲು ಜಾಗವನ್ನು ಖರೀದಿ ಮಾಡಲಾಗಿದೆ. ಆದರೆ, ಡೊಂಕು ರಸ್ತೆಯ ಮೂಲಕ ನಿರಂತರವಾಗಿ ತೊಂದರೆ ಅನುಭವಿಸುವಂತೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕೆಲಸವನ್ನು ನಿಲ್ಲಿಸಿದರು. ನೇರವಾಗಿ ರಸ್ತೆ ನಿರ್ಮಿಸಲು ಮಾತ್ರ ಅವಕಾಶ ನೀಡಲಾಗುವದು, ಯಾವ ಕಾರಣಕ್ಕೂ ಅವೈಜ್ಞಾನಿಕವಾಗಿ ನಿರ್ಮಿಸಬಾರದು ಎಂದು ಆಗ್ರಹಿಸಿದರು.ಈ ಸಂದರ್ಭ ಗ್ರಾಮದ ಪ್ರಮುಖರುಗಳಾದ ಅರಮಣಮಾಡ ಸತೀಶ್ ದೇವಯ್ಯ, ಅಳಮೇಂಗಡ ಬೋಸ್, ಮಾಚಂಗಡ ವಾಸು, ಮಾಚಂಗಡ ರೋಶನ್, ಮೇಚಂಡ ಸಂಜು, ಸಾಬು, ಸೋಮಯ್ಯ, ಮಲ್ಚೀರ ಚುಕ್ಕ, ಪೋರಂಗಡ ಡಾಲಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.