ಮಡಿಕೇರಿ, ಏ. 5: ನಗರದ ಶ್ರೀ ಮುತ್ತಪ್ಪ ದೇವಾಲಯದ ಜಾತ್ರೆಯ ಅಂಗವಾಗಿ ತಾ. 6ರಂದು (ಇಂದು) ಸಂಜೆ 5 ಗಂಟೆಗೆ ದೇವಾಲಯದಿಂದ ಆರಂಭಗೊಂಡು ಗಾಂಧಿ ಮೈದಾನದಿಂದ ಪ್ರಮುಖ ಬೀದಿಗಳಲ್ಲಿ ಮುತ್ತಪ್ಪ ದೇವರ ಕಲಶ ಮೆರವಣಿಗೆ ನಡೆಯಲಿದೆ.

ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮೆರವಣಿಗೆಗೆ ಚಾಲನೆ ನೀಡಲಿದ್ದು, ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಉದ್ಯಮಿ ಪ್ರಸಾದ್ ರೆಡ್ಡಿ ಪಾಲ್ಗೊಳ್ಳಲಿದ್ದಾರೆ.

ಮೆರವಣಿಗೆಯಲ್ಲಿ ಕೇರಳದ ಪ್ರಸಿದ್ಧ ಕಲಾ ತಂಡಗಳಾದ ಸಿಂಗಾರಿ ಮೇಳ, ಆಕರ್ಷಕ ತೆಯ್ಯಂ ತಾಲಾಪೊಲಿ ಮೆರವಣಿಗೆ ಗಮನ ಸೆಳೆಯಲಿದೆ. ಮೆರವಣಿಗೆಯಲ್ಲಿ ಮುಳಿಯ ಹಾಗೂ ಮಾತಾಜಿ ಜ್ಯುವೆಲ್ಲರ್ಸ್ ವತಿಯಿಂದ ಲಕ್ಕಿ ಕೂಪನ್ ನೀಡಲಾಗುತ್ತಿದ್ದು, ಆಯ್ದ 20 ಮಹಿಳೆಯರು ಹಾಗೂ 20 ಮಕ್ಕಳಿಗೆ ಚಿನ್ನದ ನಾಣ್ಯವನ್ನು ಬಹುಮಾನವಾಗಿ ನೀಡಲಾಗುತ್ತದೆ. ದೇವಾಲಯದ ಆವರಣದಲ್ಲಿ ಸೌರಭ ಕಲಾ ಪರಿಷತ್ ವತಿಯಿಂದ ಆಯ್ದ ಐದು ಮಂದಿಗೆ ಉಡುಗೊರೆ ನೀಡಲಾಗುತ್ತದೆ. ಉತ್ಸವದ ಅಂಗವಾಗಿ ಇಂದು ಸಂಜೆ ಮಹದೇವಪೇಟೆ ರಸ್ತೆಯಲ್ಲಿ ರಂಗೋಲಿ ಸ್ಪರ್ಧೆ ನಡೆದಿದ್ದು, ಸ್ಪರ್ಧೆಯಲ್ಲಿ ಜಯಗಳಿಸುವ ಐದು ಮಂದಿಗೆ ಮುಳಿಯ ಹಾಗೂ ಮಾತಾಜಿ ಜ್ಯುವೆಲ್ಲರ್ಸ್ ವತಿಯಿಂದ ಚಿನ್ನದ ನಾಣ್ಯವನ್ನು ಬಹುಮಾನವನ್ನಾಗಿ ನೀಡಲಾಗುತ್ತದೆ.

ತಾ. 6ರಂದು ಭಕ್ತಾದಿಗಳಿಗೆ ಕಜ್ಜಾಯ ಹಾಗೂ ಪಂಚಕಜ್ಜಾಯ ವಿತರಿಸುವ ನಿಟ್ಟಿನಲ್ಲಿ ಕಜ್ಜಾಯ ತಯಾರು ಮಾಡುವಲ್ಲಿ ಮಹಿಳೆಯರ ತಂಡ ತೊಡಗಿಸಿಕೊಂಡಿತ್ತು.

ತಾ. 6ರ ಮಧ್ಯಾಹ್ನ 1 ಸಾವಿರ ಮಂದಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿದ್ದು, ರಾತ್ರಿ 7 ಸಾವಿರ ಮಂದಿಗೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7 ಗಂಟೆಗೆ ಶ್ರೀ ವಿಷ್ಣುಮೂರ್ತಿ ಮೇಲೇರಿಗೆ ಅಗ್ನಿ ಸ್ಪರ್ಶ 8.30ಕ್ಕೆ ಪೊವ್ವದಿ ವೆಳ್ಳಾಟಂ, 9.30ಕ್ಕೆ ವಿಷ್ಣುಮೂರ್ತಿ ವೆಳ್ಳಾಟಂ, 12 ಗಂಟೆಗೆ ಶಿವಭೂತ ತೆರೆ, 1 ಗಂಟೆಗೆ ಗುಳಿಗ ತೆರೆ, 2.30 ಗಂಟೆಗೆ ಕುಟ್ಟಿಚಾತನ್ ತೆರೆ, ಮುಂಜಾನೆ 3 ಗಂಟೆಗೆ ಕಳಗಪಾಟ್, ಸಂದ್ಯಾವೇಲೆ ನೆರವೇರಲಿದೆ.