ಮಡಿಕೇರಿ, ಏ. 5: ಚುನಾವಣಾ ಆಯೋಗದಿಂದ ಜಾರಿಗೊಂಡಿರುವ ನೀತಿ ಸಂಹಿತೆಯಿಂದಾಗಿ ಕೊಡಗಿನ ಸಂಪ್ರದಾಯಗಳಿಗೆ ಧಕ್ಕೆಯಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತಗೊಳ್ಳತೊಡಗಿದೆ. ಅಸಮಾಧಾನಕ್ಕೆ ಕೆಲವು ಇಲಾಖೆಗಳ ದ್ವಂದ್ವ ನಿಲುವು ಕಾರಣವಾಗಿದೆ.ಜಿಲ್ಲಾ ದಂಡಾಧಿಕಾರಿ ಹಾಗೂ ಚುನಾವಣಾಧಿಕಾರಿಯಾಗಿರುವ ಕೊಡಗು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಸುದ್ದಿಗೋಷ್ಠಿ ನಡೆಸಿ, ಮದುವೆ, ನಾಮಕರಣದಂತಹ ಸಾಂಪ್ರದಾಯಿಕ ಆಚರಣೆಗಳಿಗೆ ಸಂಹಿತೆ ಅಡ್ಡಿಯಿಲ್ಲವೆಂದು ಪ್ರಕಟಿಸಿದ್ದಾರೆ.ಬದಲಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ಈಗಾಗಲೇ ಅಬ್ಕಾರಿ ಇಲಾಖೆಯಿಂದ ಕಲ್ಯಾಣ ಮಂಟಪಗಳಿಗೆ ಲಿಖಿತ ನೋಟೀಸ್ ಜಾರಿಗೊಳಿಸಿದ್ದು, ಕಲ್ಯಾಣ ಮಂಟಪ ಅಥವಾ ಸಮಾಜಗಳಲ್ಲಿ ಮದ್ಯ ಸೇವನೆಗೆ ಅವಕಾಶ ನೀಡದಂತೆಯೂ, ಮದ್ಯ ದಾಸ್ತಾನುಗೊಳಿಸದಂತೆಯೂ ನಿರ್ದೇಶಿಸಿದೆ. ಒಂದೆಡೆ ಈ ಆದೇಶದ ಹಿಂದೆಯೇ ಮೌಖಿಕವಾಗಿ ಒಂದು ದಿನದ ಲೈಸೆನ್ಸ್ ಪಡೆಯಲು ಅವಕಾಶ ಇರುವದಾಗಿಯೂ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ವೇಳೆ ಮದುವೆ ಇತ್ಯಾದಿ ಸಮಾರಂಭಗಳನ್ನು ಆಯೋಜಿಸಿ, ಮದ್ಯ ಸೇವನೆ ವ್ಯವಸ್ಥೆಗೊಳಿಸುವದಾದರೆ ಆಯಾ ದಿನದಂದು ಸಮಾರಂಭ

(ಮೊದಲ ಪುಟದಿಂದ) ಮಂಟಪಗಳಲ್ಲಿ ಮದ್ಯ ಬಳಕೆಗೆ ಒಂದು ದಿನ ಮಟ್ಟಿಗೆ ತಾತ್ಕಾಲಿಕ ಅನುಮತಿ ಪತ್ರ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.

ರೂ.11,500 ಪಾವತಿಸಬೇಕು: ಈ ರೀತಿ ಸಮಾರಂಭಗಳಿಗೆ ಒಂದು ದಿನ ಮಟ್ಟಿಗೆ ತಾತ್ಕಾಲಿಕ ಅನುಮತಿ ಪಡೆಯಬೇಕಾದರೆ ಅಬ್ಕಾರಿ ಇಲಾಖೆಗೆ ರೂ.11,500 ಮೊತ್ತವನ್ನು ಪಾವತಿಸಬೇಕೆಂದು ಷರತ್ತು ವಿಧಿಸಲಾಗಿದೆ. ಈ ಮೊತ್ತ ಸರಕಾರಕ್ಕೆ ಜಮೆಯಾಗಲಿದ್ದು, ಹಣ ಹಿಂತಿರುಗಿಸುವದಿಲ್ಲವೆಂದು ಮೂಲಗಳು ಖಚಿತಪಡಿಸಿವೆ.

ಹೀಗಾಗಿ ಚುನಾವಣೆ ಘೋಷಣೆಗೆ ಮುನ್ನವೇ ಜಿಲ್ಲೆಯ ಅನೇಕ ಕಡೆಗಳಲ್ಲಿ ವಿವಾಹ ಸಮಾರಂಭಗಳು ನಿಶ್ಚಯ ಆಗಿದ್ದು, ಚುನಾವಣಾ ದಿನದಂದು ಕೂಡ ವಿವಾಹ ನಡೆಸಲು ತಯಾರಿಗೊಂಡಿ ರುವ ಬಗ್ಗೆ ಮಾಹಿತಿ ಲಭಿಸಿದೆ. ಅಲ್ಲದೆ ಕೊಡಗಿನ ಸಂಪ್ರದಾಯದಂತೆ ಮದುವೆಯಂತಹ ಸಮಾರಂಭಗಳಲ್ಲಿ ಮದ್ಯಬಳಕೆ ಸಂಪ್ರದಾಯವೇ ಆಗಿದೆ.

ಈಗಿನ ಪರಿಸ್ಥಿತಿಯಲ್ಲಿ ಮದುವೆ ಮಂಟಪಗಳ ಬಾಡಿಗೆ ಹಾಗೂ ಇತರ ಖರ್ಚು- ವೆಚ್ಚಗಳನ್ನು ಭರಿಸಿ ಶುಭ ಸಮಾರಂಭಗಳನ್ನು ನೆರವೇರಿಸಲು ಸಾಮಾನ್ಯ ಕುಟುಂಬಗಳು ಬವಣೆಪಡುತ್ತಿರುವಾಗ, ಹೆಚ್ಚುವರಿ ರೂ.11,500 ಮೊತ್ತವನ್ನು ಪಾವತಿಸುವದರಿಂದ ಆರ್ಥಿಕ ಹೊಡೆತ ಅನುಭವಿಸಬೇಕಾಗಿದೆ ಎಂಬ ಅಸಮಾಧಾನ ಒಂದೆಡೆಯಾಗಿದೆ.

ಇನ್ನೊಂದೆಡೆ ಕೊಡಗಿನ ಸಂಪ್ರದಾಯಗಳಿಗೆ ಈ ಧೋರಣೆ ಭಂಗವಾಗಿದ್ದು, ಹಣ ಕಟ್ಟಿಸಿಕೊಳ್ಳು ವದರಿಂದ ಯಾವ ರೀತಿ ಚುನಾವಣಾ ಸಂಹಿತೆ ಪಾಲಿಸಿದಂತಾ ಗಲಿದೆ ಎಂದು ಪ್ರಶ್ನಿಸಿರುವ ನಾಗರಿಕರು, ಕೌಟುಂಬಿಕ ಸಮಾರಂಭಗಳಲ್ಲಿ ಮದ್ಯ ಬಳಕೆಗೆ ನಿರ್ಬಂಧಿಸುವದಾದರೆ, ಮದ್ಯದಂಗಡಿ- ಬಾರ್‍ಗಳನ್ನು ನಡೆಸುವದು ಮತ್ತು ವ್ಯಾಪಾರ - ವಹಿವಾಟು ಸರಿಯೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಚುನಾವಣಾ ಸಂಹಿತೆ ಹೆಸರಿನಲ್ಲಿ ವಿವಾಹ ಇತ್ಯಾದಿ ಶುಭ ಸಮಾರಂಭಗಳಲ್ಲಿ ಮದ್ಯ ಬಳಕೆ ಹಾಗೂ ಕೋವಿ ಹಿಡುವಳಿದಾರರ ಹಕ್ಕು ಕಸಿದುಕೊಳ್ಳುವಂತಹ ನಿರ್ಧಾರಗಳನ್ನು ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮರು ಪರಿಶೀಲಿಸ ಬೇಕೆಂದು ವಿ.ಹಿಂ.ಪ. ಜಿಲ್ಲಾಧ್ಯಕ್ಷ ಮಾತಂಡ ಟಾಟಾ ಬೋಪಯ್ಯ ಹಾಗೂ ಕಾರ್ಯಾಧ್ಯಕ್ಷ ಐಚಂಡ ಎಂ. ಅಪ್ಪಯ್ಯ ಆಗ್ರಹಿಸಿದ್ದಾರೆ.

ಈಗಾಗಲೇ ಪೂರ್ವ ನಿಯೋಜಿತ ಶುಭ ಸಮಾರಂಭಗಳಿಗೆ ಚುನಾವಣಾ ಸಂಹಿತೆ ಹೆಸರಿನಲ್ಲಿ ಅಡಚಣೆ ಮಾಡದಂತೆಯೂ ಪತ್ರಿಕಾ ಹೇಳಿಕೆಯೊಂದಿಗೆ ಗಮನ ಸೆಳೆದಿದ್ದಾರೆ.