ಗೋಣಿಕೊಪ್ಪಲು, ಏ. 5 : ಪೆÇನ್ನಂಪೇಟೆ ಗ್ರಾ.ಪಂ. ವ್ಯಾಪ್ತಿಯ ತ್ಯಾಜ್ಯವನ್ನು ಅರುವತ್ತೊಕ್ಲು ಗ್ರಾ.ಪಂ. ವ್ಯಾಪ್ತಿಯ ಖಾಸಗಿ ಕೆರೆಗೆ ವಿಲೇವಾರಿ ಮಾಡುತ್ತಿರುವದನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳು ಟ್ರ್ಯಾಕ್ಟರ್ ಹಾಗೂ ಟಿಪ್ಪರ್ ಅನ್ನು ತಡೆದು ಪ್ರತಿಭಟನೆ ನಡೆಸಿ ಕಸವನ್ನು ಸುರಿಯದಂತೆ ವಿರೋಧಿಸಿದರು. ಪೆÇನ್ನಂಪೇಟೆ ಹಳೆಯ ನ್ಯಾಯಾಲಯದ ಮುಂಭಾಗದಲ್ಲಿ ವಿಲೇವಾರಿ ಮಾಡಿದ ಕಸವನ್ನು ಅರುವತ್ತೊಕ್ಲು ಗ್ರಾ.ಪಂ. ವ್ಯಾಪ್ತಿಯ ನಿವಾಸಿ ಬಾನಂಡ ರಮೇಶ್ ಅವರ ಕೆರೆಯಲ್ಲಿ ವಿಲೇವಾರಿ ಮಾಡಲು ಪೆÇನ್ನಂಪೇಟೆ ಗ್ರಾ.ಪಂ. ಕ್ರಮ ಕೈಗೊಳ್ಳಲಾಗಿತ್ತು. ಬುಧವಾರ ರಾತ್ರಿಯಿಂದ ಗುರುವಾರದವರೆಗೆ 20ಕ್ಕೂ ಹೆಚ್ಚು ಟಿಪ್ಪರ್ ಹಾಗೂ ಟ್ರ್ಯಾಕ್ಟರ್‍ಗಳಲ್ಲಿ ಕಸವನ್ನು

(ಮೊದಲ ಪುಟದಿಂದ) ತಂದು ಕೆರೆ ಮುಚ್ಚಲು ಕಸವನ್ನು ಸುರಿಯಲಾಗುತಿತ್ತು. ಈ ಸಂದರ್ಭ ಪ್ಲಾಸ್ಟಿಕ್ ತ್ಯಾಜ್ಯಗಳು, ಒಡೆದ ಗಾಜಿನ ಬಾಟಲಿಗಳು ರಸ್ತೆಯ ಉದ್ದಕ್ಕೂ ಬಿದ್ದು, ರಸ್ತೆಯಲ್ಲಿ ನಡೆದಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಖಂಡಿಸಿ ಸ್ಥಳಿಯ ನಿವಾಸಿಗಳಾದ ಅಮ್ಮತ್ತೀರ ವಾಸುವರ್ಮ, ಡಾ. ಬಾನಂಡ ಕಿರಣ್, ಸುರೇಶ್ ಸೇರಿದಂತೆ ಹಲವರು ಕಸವನ್ನು ಈ ಮಾರ್ಗದಲ್ಲಿ ಸಾಗಿಸದಂತೆ ಹಾಗೂ ಕೆರೆಗೆ ಕಸವನ್ನು ಸುರಿಯದಂತೆ ತಡೆಯೊಡ್ಡಿದರು. ಪ್ಲಾಸ್ಟಿಕ್ ತ್ಯಾಜ್ಯವನ್ನು ಕೆರೆಗೆ ಸುರಿಯುವದರಿಂದ ಅಂತರ್ಜಲ ಕುಸಿಯಲಿದೆ. ಇದರಿಂದ ನೀರಿಗೆ ಸಮಸ್ಯೆ ಆಗಲಿದೆ. ಪ್ಲಾಸ್ಟಿಕ್ ತ್ಯಾಜ್ಯ ಸುರಿಯುವದರಿಂದ ಸುತ್ತಮುತ್ತಲಿನ ವಾತಾವರಣ ಕಲುಷಿತಗೊಳ್ಳಲಿದೆ. ಹೀಗಾಗಿ ಕಸವನ್ನು ಸುರಿಯಬಾರದು ಎಂದು ಡಾ. ಕಿರಣ್ ಹಾಗೂ ಅಮ್ಮತ್ತೀರ ವಾಸುವರ್ಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ್ ಅವರಲ್ಲಿ ತಕ್ಷಣವೆ ಕಸ ವಿಲೇವಾರಿಗೊಳಿಸುತ್ತಿರುವದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಒತ್ತಾಯಕ್ಕೆ ಮಣಿದ ಪಿ.ಡಿ.ಓ ಸುರೇಶ್ ಅವರು ಕಸ ವಿಲೇವಾರಿಗೊಳಿಸುವದನ್ನು ಸ್ಥಗಿತಗೊಳಿಸಿ ಗ್ರಾಮಸ್ಥರು ಹಾಗೂ ಕೆರೆಯ ಮಾಲೀಕರೊಂದಿಗಿನ ಹೊಂದಾಣಿಕೆ ಮಾತುಕತೆಯ ನಂತರ ಮುಂದಿನ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು. -ಎನ್.ಎನ್. ದಿನೇಶ್