ಸಿದ್ದಾಪುರ, ಏ. 5: ಕೊಡಗು ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ತಾ.8 ರಂದು ಚಾಲನೆ ದೊರಕಲಿದ್ದು, ಮೂರನೇ ಆವೃತ್ತಿ ಪಂದ್ಯಾಟವನ್ನು ವಿಜೃಂಭಣೆಯಿಂದ ನಡೆಸಲಿರುವದಾಗಿ ಕೆ.ಸಿ.ಎಲ್ ಪ್ರಚಾರ ಸಮಿತಿ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದಾಪುರದ ಸಿಟಿ ಬಾಯ್ಸ್ ಯುವಕ ಸಂಘದ ವತಿಯಿಂದ ಕೊಡಗು ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾಟ ನಡೆಸುತ್ತಿದ್ದು, ಈ ಬಾರಿ ಮೂರನೇ ಆವೃತ್ತಿಗೆ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ತಾ.8 ರಂದು ಪಂದ್ಯಾವಳಿಗೆ ಅಧಿಕೃತ ಚಾಲನೆ ದೊರಕಲಿದ್ದು, ಕೊಡಗು ಜಿಲ್ಲಾ ಪತ್ರಕರ್ತರ ತಂಡ ಹಾಗೂ ಕೆ.ಸಿ.ಎಲ್ ಸಮಿತಿಯ ನಡುವೆ ಪ್ರದರ್ಶನ ಪಂದ್ಯಾಟ ನಡೆಯಲಿದೆ. ಕ್ರೀಡಾಕೂಟದಲ್ಲಿ ಒಟ್ಟು 12 ತಂಡಗಳು ಭಾಗವಹಿಸುತ್ತಿದ್ದು, ತಲಾ 6 ತಂಡಗಳಂತೆ ಎರಡು ಗುಂಪುಗಳಲ್ಲಿ ಲೀಗ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದೆ ಎಂದರು. ಮೂರನೇ ಆವೃತ್ತಿಗೆ ಜಿಲ್ಲೆಯ ವಿವಿಧ ಭಾಗದ ಒಟ್ಟು 270 ಕ್ಕೂ ಅಧಿಕ ಆಟಗಾರರು ಅರ್ಜಿ ಸಲ್ಲಿಸಿದ್ದು, 175 ಮಂದಿ ಆಟಗಾರರು ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಹರಾಜಾಗಿದ್ದಾರೆ. ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವದು ಹಾಗೂ ಅವರಿಗೆ ಪ್ರೋತ್ಸಾಹ ನೀಡುವದು ಕ್ರೀಡಾಕೂಟದ ಪ್ರಮುಖ ಉದ್ದೇಶವಾಗಿದೆ ಎಂದರು.

ಪಂದ್ಯಾವಳಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅನುಭವಿ ತೀರ್ಪುಗಾರರು ಹಾಗೂ ಸ್ಕೋರರ್ ಕಾರ್ಯನಿರ್ವಹಿಸಲಿದ್ದಾರೆ. ಸಿದ್ದಾಪುರ ಪ್ರೌಢಶಾಲಾ ಮೈದಾನದಲ್ಲಿ ಕಳೆದ ಒಂದು ತಿಂಗಳಿನಿಂದ ಪಿಚ್ ತಯಾರಿ ಕೆಲಸ ನಡೆಯುತ್ತಿದ್ದು, ಇದೀಗ ಅತ್ಯಂತ ಗುಣಮಟ್ಟದ ಪಿಚ್ ತಯಾರಾಗಿದೆ ಎಂದು ಮಾಹಿತಿ ನೀಡಿದರು. ಕ್ರೀಡಾಕೂಟದ ಸಮಾರೋಪ ಸಮಾರಂಭ ತಾ.12 ರಂದು ನಡೆಯಲಿದ್ದು, ಜಿಲ್ಲೆ ಹಾಗೂ ರಾಜ್ಯದ ವಿವಿಧ ಕ್ಷೇತ್ರದ ಗಣ್ಯರು ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕೂಡ ನಡೆಯಲಿದೆ ಎಂದರು.

ಗೋಷ್ಠಿಯಲ್ಲಿ ಕೆ.ಸಿ.ಎಲ್ ನ ಖಜಾಂಚಿ ಶಾಹುಲ್, ಪ್ರಚಾರ ಸಮಿತಿ ಸಂಚಾಲಕ ಎ.ಎನ್ ವಾಸು, ವೇದಿಕೆ ಸಮಿತಿ ಅಧ್ಯಕ್ಷ ರತೀಶ್, ಪದಾಧಿಕಾರಿ ಸಫೀರ್ ಇದ್ದರು.