ಮಡಿಕೇರಿ, ಏ. 5: ಹಾಲಿ ಬಿಜೆಪಿ ಶಾಸಕದ್ವಯರಿಗೆ ಪಕ್ಷದಿಂದ ಈ ಬಾರಿ ಚುನಾವಣೆಯಲ್ಲಿ ಟಿಕೆಟ್ ನೀಡದಿದ್ದರೆ ಬಂಡಾಯ ಸ್ಪರ್ಧಿಸುವದಾಗಿ ಮತ್ತು ಆರ್‍ಎಸ್‍ಎಸ್ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ತಾ.ಪಂ. ಸದಸ್ಯ ಮಣಿ ಉತ್ತಪ್ಪ ವಿರುದ್ಧ ಕ್ರಮ ಜರುಗಿಸುವ ನಿಟ್ಟಿನಲ್ಲಿ ಇಂದು ಜಿಲ್ಲಾ ಬಿಜೆಪಿ ತುರ್ತು ಸಭೆ ನಡೆಸಿರುವ ಕುರಿತು ಮೂಲಗಳಿಂದ ಗೊತ್ತಾಗಿದೆ.ಪಕ್ಷದ ಅಧ್ಯಕ್ಷ ಬಿ.ಬಿ. ಭಾರತೀಶ್ ಹಾಗೂ ಇತರರು ಮಣಿ ಉತ್ತಪ್ಪ ವಿರುದ್ಧ ಕ್ರಮದ ಬಗ್ಗೆ ಪ್ರಸ್ತಾಪಿಸಿದಾಗ, ಬಿಜೆಪಿಯ ಪ್ರಮುಖ ಪದಾಧಿಕಾರಿಗಳೇ ಅಧ್ಯಕ್ಷರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಂದರ್ಭ ಒದಗಿತ್ತೆನ್ನಲಾಗಿದೆ. ಮಣಿ ಉತ್ತಪ್ಪ ಹೇಳಿಕೆಯನ್ನು ಸಭೆಯಲ್ಲಿ ಖಂಡಿಸಲಾಯಿತು. ಆದರೆ ಜಿಲ್ಲಾಧ್ಯಕ್ಷ ಭಾರತೀಶ್ ಅವರೇ ಪಕ್ಷದ ವಿಭಿನ್ನ ಬಣದೊಂದಿಗೆ ಗುರುತಿಸಿಕೊಂಡು, ಅಂತಹವರಿಗೆ ರಕ್ಷಣೆ ನೀಡುತ್ತಿ ರುವದಾಗಿ ಅಸಮಾಧಾನ ವ್ಯಕ್ತಪಡಿಸಿ ದರೆನ್ನಲಾಗಿದೆ.ಅಲ್ಲದೆ, ಚುನಾವಣಾ ಸಂದರ್ಭ ಮಣಿ ಉತ್ತಪ್ಪ ವಿರುದ್ಧ ಕ್ರಮ ಕೈಗೊಳ್ಳಬಾರದೆಂದೂ, ಅವರು ಆರ್‍ಎಸ್‍ಎಸ್

(ಮೊದಲ ಪುಟದಿಂದ) ಬಗ್ಗೆ ನೀಡಿರುವ ಹೇಳಿಕೆ ಖಂಡಿಸಿ ನಿರ್ಣಯದೊಂದಿಗೆ, ಮುಂದೆ ಇಂತಹ ಹೇಳಿಕೆ ನೀಡದಂತೆ ನೋಟೀಸ್ ನೀಡುವಂತೆಯೂ ಒತ್ತಾಯಿಸಿದರೆನ್ನಲಾಗಿದೆ.

ಈ ವೇಳೆ ಬಿಜೆಪಿಯ ಕೆಲವರು ಜಿಲ್ಲಾಧ್ಯಕ್ಷ ಭಾರತೀಶ್ ಪರ ನಿಲುವಿನೊಂದಿಗೆ ಪಕ್ಷದ ವಿಭಿನ್ನ ಬಣದ ವಿರುದ್ಧವೂ ಕ್ರಮಕ್ಕೆ ಪಟ್ಟು ಹಿಡಿದರು. ಮಣಿ ಉತ್ತಪ್ಪ ವಿರುದ್ಧ ಕ್ರಮ ಜರುಗಿಸುವ ಮುನ್ನ ಇತರರ ವಿರುದ್ಧ ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದ್ದಾಗಿ ತಿಳಿದು ಬಂದಿದೆ. ಸುಮಾರು ಎರಡು ಗಂಟೆಗಳ ಸಮಯ ಕಾವೇರಿದ ಚರ್ಚೆಯೊಂದಿಗೆ, ಮಣಿ ಉತ್ತಪ್ಪ ವಿರುದ್ಧ ಕ್ರಮಕೈಗೊಳ್ಳುವದಾದರೆ ನಿರಂತರ ವಿಭಿನ್ನ ಬಣವಾಗಿ ಚಟುವಟಿಕೆಯಲ್ಲಿ ತೊಡಗಿರುವ ಎಂ.ಎಂ. ರವೀಂದ್ರ ಹಾಗೂ ಇತರರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪರಸ್ಪರ ವಾಗ್ವಾದ ನಡೆಯಿತೆನ್ನಲಾಗಿದೆ.

ಈ ಹಂತದಲ್ಲಿ ಇಂದಿನ ಸಭೆಗೆ ಅನೇಕರು ಗೈರು ಹಾಜರಾಗಿರುವ ಕಾರಣ, ಎಲ್ಲರ ಉಪಸ್ಥಿತಿಯಲ್ಲಿ ನಿರ್ಧಾರ ಕೈಗೊಳ್ಳಬೇಕೆಂಬ ಅಭಿಪ್ರಾಯವೂ ವ್ಯಕ್ತಗೊಂಡಿದ್ದಾಗಿ ಮೂಲಗಳಿಂದ ತಿಳಿದು ಬಂದಿದೆ. ಆದರೆ ಪಟ್ಟು ಬಿಡದ ಅಧ್ಯಕ್ಷ ಭಾರತೀಶ್ ಅವರು ಈ ಬಗ್ಗೆ ರಾಜ್ಯಕ್ಕೆ ಮಣಿ ಉತ್ತಪ್ಪ ವಿರುದ್ಧ ದೂರು ಸಲ್ಲಿಸುವದಾಗಿ ಘೋಷಿಸಿದರೆನ್ನ ಲಾಗಿದೆ. ಸಭೆಯಲ್ಲಿ ಬಿಜೆಪಿ ಪ್ರಮುಖರಾದ ಮನು ಮುತ್ತಪ್ಪ, ಬಾಲಚಂದ್ರ ಕಳಗಿ, ರಾಬಿನ್ ದೇವಯ್ಯ, ರವಿಕಾಳಪ್ಪ, ಬೆಲ್ಲು ಸೋಮಯ್ಯ, ರವಿ ಬಸಪ್ಪ, ಉಷಾ ದೇವಮ್ಮ, ಯಮುನ ಚಂಗಪ್ಪ, ಮೋಂತಿ ಗಣೇಶ್, ಎಸ್.ಪಿ. ಪೊನ್ನಪ್ಪ, ಹೆಚ್.ಕೆ. ಮಾದಪ್ಪ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡಿದ್ದಾಗಿ ತಿಳಿದು ಬಂದಿದೆ.