ವೀರಾಜಪೇಟೆ, ಏ. 5: ಅಮ್ಮತ್ತಿಯ ಪಂಜರಿ ಎರವರ ಮಣಿ ಎಂಬಾತನು ಪಣಿಎರವರ ಮಂಜು ಎಂಬಾತನಿಂದ ಪಡೆದ ಕೇವಲ ರೂ.20 ಸಾಲವನ್ನು ಹಿಂತಿರುಗಿಸಲಿಲ್ಲವೆಂಬ ಕಾರಣಕ್ಕಾಗಿ ಚೂರಿಯಿಂದ ಮಣಿಯ ಮರ್ಮಾಂಗಕ್ಕೆ ತಿವಿದು ಕೊಲೆ ಮಾಡಿದ್ದ ಆರೋಪಕ್ಕಾಗಿ, ಇಲ್ಲಿನ ಎರಡನೇ ಅಪರ ಹಾಗೂ ಸೆಷನ್ಸ್ ನ್ಯಾಯಾಧೀಶ ಮೋಹನ್ ಪ್ರಭು ಆರೋಪಿ ಮಂಜುವಿಗೆ ಜೀವಾವಧಿ ಶಿಕ್ಷೆ ಹಾಗೂ ರೂ 5000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ತಾ. 21.5.2017ರಂದು ರಾತ್ರಿ 8.30 ಗಂಟೆಗೆ ಅಮ್ಮತ್ತಿಯ ಮುಖ್ಯರಸ್ತೆಯ ಸರ್ಕಲ್‍ನಲ್ಲಿರುವ ಬಾರ್‍ವೊಂದರ ಮುಂದುಗಡೆ ನಿಂತಿದ್ದ ಮಣಿಗೆ ಸಾಲ ಕೊಟ್ಟಿದ್ದ ರೂ 20ನ್ನು ಹಿಂತಿರುಗಿಕೊಡುವಂತೆ ಕೇಳಿದಾಗ ಸಾಲ ಹಿಂತಿರುಗಿಸಲು ತನ್ನಲ್ಲಿ ಹಣವಿಲ್ಲ ಎಂದಾಕ್ಷಣ ಆರೋಪಿ ಮಂಜು ತನ್ನ ಜೇಬಿನಲ್ಲಿ ಅಡಗಿಸಿಟ್ಟಿದ್ದ ಚೂರಿಯನ್ನು ತೆಗೆದು ಏಕಾಏಕಿ ಮರ್ಮಾಂಗಕ್ಕೆ ಚುಚ್ಚಿದಾಗ ಮಣಿ ಅಲ್ಲಿಯೇ ಕುಸಿದು ಬಿದ್ದನು. ನಂತರ ಗಂಭೀರ ಸ್ವರೂಪದ ಗಾಯಗೊಂಡ ಆತನನ್ನು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಅಸುನೀಗಿದ್ದ ಈ ಬಗ್ಗೆ ಮೃತನ ಪತ್ನಿ ಪೊನ್ನಮ್ಮ ಇಲ್ಲಿನ ಗ್ರಾಮಾಂತರ ಪೊಲೀಸರಿಗೆ ನೀಡಿದ ದೂರಿನ ಮೇರೆ ಪೊಲೀಸರು ತಲೆಮರೆಸಿಕೊಂಡಿದ್ದ ಮಂಜನನ್ನು ಮೂರು ದಿನಗಳ ನಂತರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇಲ್ಲಿನ ಸಮುಚ್ಚಯ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಎನ್.ಕುಮಾರ್ ಆರಾಧ್ಯ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.

ಆರೋಪಿ ಮಂಜು ರೂ. 5000 ದಂಡ ಪಾವತಿಸದಿದ್ದರೆ ಅಧಿಕವಾಗಿ 6 ತಿಂಗಳ ಸಜೆ ಅನುಭವಿಸುವಂತೆಯೂ ಮೃತನ ಪತ್ನಿ ಪೊನ್ನಮ್ಮ ಹಾಗೂ ಒಂದು ವರ್ಷದ ಮಗುವಿಗೆ ಜಿಲ್ಲಾಧಿಕಾರಿಯವರು ಸೂಕ್ತ ಪರಿಹಾರ ಕಲ್ಪಿಸುವಂತೆ ನಿರ್ದೇಶನ ನೀಡಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಅಭಿಯೋಜಕ ಡಿ. ನಾರಾಯಣ ವಾದಿಸಿದರು.