ಸೋಮವಾರಪೇಟೆ, ಏ.5: ಕ್ರಿಮಿನಲ್ ಮೊಕದ್ದಮೆಯೊಂದಕ್ಕೆ ಸಂಬಂಧಿಸಿದಂತೆ ಆರೋಪಿಗೆ ಜಾಮೀನು ನೀಡಿದ, ಜಾಮೀನುದಾರರನ್ನು ಗುರುತಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ನ್ಯಾಯಾಲಯದ ವಕೀಲರೋರ್ವರ ವಿರುದ್ಧ ಮೊಕದ್ದಮೆ ದಾಖಲಾಗಿದ್ದು, ಇದನ್ನು ಖಂಡಿಸಿ ಸೋಮವಾರಪೇಟೆ ವಕೀಲರ ಸಂಘದ ಸದಸ್ಯರುಗಳು ಕಲಾಪ ಬಹಿಷ್ಕರಿಸಿದರು.

ಶನಿವಾರಸಂತೆಯಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಆರೋಪಿ ಪ್ರದೀಪ್ ಎಂಬಾತನಿಗೆ ಕಳೆದ 25.11.2014ರಲ್ಲಿ ವೇದಮೂರ್ತಿ ಎಂಬವರು ಶನಿವಾರಸಂತೆ ಸಮೀಪದ ದೊಡ್ಡಕೊಳತ್ತೂರು ಗ್ರಾಮದ ಜಯಲಿಂಗಪ್ಪ ಎಂಬವರಿಗೆ ಸೇರಿದ ಆರ್‍ಟಿಸಿಯನ್ನು ಸೋಮವಾರಪೇಟೆ ನ್ಯಾಯಾಲಯಕ್ಕೆ ನೀಡಿ ತಾನೇ ಜಯಲಿಂಗಪ್ಪ ಎಂದು ತಿಳಿಸಿ ಆರೋಪಿಗೆ ಜಾಮೀನು ಕೊಡಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪರ ಸೋಮವಾರಪೇಟೆಯ ವಕೀಲರಾದ ಮನೋಹರ್ ಅವರು ವಕಾಲತ್ತು ವಹಿಸಿದ್ದರು.

ಜಾಮೀನು ನೀಡುವ ಸಂದರ್ಭ ನ್ಯಾಯಾಲಯದ ನಿಯಮದಂತೆ ಜಾಮೀನುದಾರರನ್ನು ಗುರುತಿಸುವ ಕಾರ್ಯ ವಕೀಲರಿಂದ ಆಗಬೇಕಿದ್ದು, ಅದರಂತೆ ಮನೋಹರ್ ಅವರು ಜಾಮೀನುದಾರ ವ್ಯಕ್ತಿಯನ್ನು ಗುರುತಿಸಿದ್ದಾರೆ. ಇತ್ತೀಚೆಗೆ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ ಬಗ್ಗೆ ತಿಳಿದುಬಂದಿದ್ದು, ಈ ಹಿನ್ನೆಲೆ ವೇದಮೂರ್ತಿ ಅವರೊಂದಿಗೆ ವಕೀಲರಾದ ಮನೋಹರ್ ಅವರನ್ನೂ ಆರೋಪಿಯನ್ನಾಗಿಸಿ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ. ಇದು ಸರಿಯಲ್ಲ; ಇಂತಹ ಘಟನೆಗಳು ಮುಂದುವರೆದರೆ ವಕೀಲರು ಕೆಲಸ ಮಾಡಲು ಅಸಾಧ್ಯವಾಗುತ್ತದೆ ಎಂದು ವಕೀಲರ ಸಂಘದ ಉಪಾಧ್ಯಕ್ಷ ಕಾಟ್ನಮನೆ ವಿಠಲ್‍ಗೌಡ ಹೇಳಿದರು.

ಕಲಾಪವನ್ನು ಬಹಿಷ್ಕರಿಸಿ ನ್ಯಾಯಾಲಯದ ಗೇಟ್ ಬಳಿ ಸೇರಿದ ವಕೀಲರ ಸಂಘದ ಪದಾಧಿಕಾರಿಗಳು ಮೊಕದ್ದಮೆ ದಾಖಲಾಗಿರುವ ಕ್ರಮವನ್ನು ಖಂಡಿಸಿದರಲ್ಲದೇ, ತಾ. 7ರವರೆಗೆ ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸುತ್ತಿದ್ದು, ಕುಶಾಲನಗರ, ಮಡಿಕೇರಿ, ವೀರಾಜಪೇಟೆ ಸೇರಿದಂತೆ ಹೊರ ಜಿಲ್ಲೆಯ ವಕೀಲರುಗಳು ಬೆಂಬಲ ನೀಡಲಿದ್ದಾರೆ ಎಂದರು. ಪ್ರಕರಣದ ಬಗ್ಗೆ ಬಾರ್ ಕೌನ್ಸಿಲ್‍ನ ರಾಜ್ಯ ಘಟಕ ಸೇರಿದಂತೆ ಜಿಲ್ಲಾ ನ್ಯಾಯಾಧೀಶರ ಗಮನ ಸೆಳೆಯಲಾಗುವದು. ಮುಂದಿನ ಶನಿವಾರದವರೆಗೆ ಕಾದು ನೋಡಿ ಮುಂದಿನ ಕ್ರಮದ ಬಗ್ಗೆ ಚಿಂತಿಸಲಾಗುವದು ಎಂದು ವಿಠಲ್ ಗೌಡ ತಿಳಿಸಿದರು.

ಈ ಸಂದರ್ಭ ವಕೀಲರ ಸಂಘದ ಕಾರ್ಯದರ್ಶಿ ಹೇಮಚಂದ್ರ, ಹಿರಿಯ ವಕೀಲರಾದ ಎನ್.ಸಿ. ಚನ್ನಬಸವಯ್ಯ, ಪಿ.ಕೆ. ಗಣಪತಿ, ಡಿ.ಕೆ. ತಿಮ್ಮಯ್ಯ, ಕೆ.ಎಸ್. ಪದ್ಮನಾಭ್, ಅಪ್ಪಯ್ಯ, ಬಿ.ಜೆ. ದೀಪಕ್, ಮುತ್ತಣ್ಣ, ಪಿ.ಎಸ್. ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ನ್ಯಾಯಾಲಯಕ್ಕೆ ಸುಳ್ಳು ದಾಖಲೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸ್ತೇದಾರ್ ಲಕ್ಷ್ಮಿ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.