ಗೋಣಿಕೊಪ್ಪ ವರದಿ, ಏ. 5 : ಪರಿಶಿಷ್ಟ ಜಾತಿ ಪಂಗಡಗಳ ಮೇಲಿನ ದೌರ್ಜನ್ಯಗಳಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಬೇಕೆಂದು ದಲಿತ ಸಂಘರ್ಷ ಸಮಿತಿಯ ವಿಭಾಗ ಸಂಚಾಲಕ ಕೃಷ್ಣಪ್ಪ ಆಗ್ರಹಿಸಿದರು.

ಸ್ವಾತಂತ್ರ್ಯ ಪೂರ್ವದಿಂದಲೂ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಜನರು ಮೇಲ್ಜಾತಿಯವರಿಂದ ಕಿರುಕುಳ ಅನುಭವಿಸುತ್ತಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂವಿಧಾನದಲ್ಲಿ ಎಸ್ಸಿ, ಎಸ್ಟಿ ಕಾಯಿದೆಯನ್ನು ತರಲಾಗಿತ್ತು. ಸುಪ್ರೀಂ ಕೋರ್ಟ್ ಮಾರ್ಚ್ 30 ರ ತೀರ್ಪಿನಲ್ಲಿ ಎಸ್ಸಿ, ಎಸ್ಟಿ ಖಾಯಿದೆಯಡಿಯಲ್ಲಿ ದೂರು ದಾಖಲಾದ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಪಡೆಯುವ ಅವಕಾಶ ನೀಡಿದೆ. ಆರೋಪಿಗಳನ್ನು ಬಂಧಿಸುದಕ್ಕಿಂತ ಮೊದಲು ಸೂಕ್ತ ಪ್ರಾಧಿಕಾರದ ಅನುಮತಿ ಪಡೆದುಕೊಳ್ಳಬೇಕೆಂದು ಕೋರ್ಟ್ ತೀರ್ಪು ನೀಡಿದೆ. ಇದು ನಮ್ಮ ಹಕ್ಕು ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಹುನ್ನಾರವಾಗಿದೆ. ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ದಸಂಸ ಜಿಲ್ಲಾ ಸಂಚಾಲಕ ಪರಶುರಾಮ್ ಮಾತನಾಡಿ, ಈ ತೀರ್ಪಿನ ವಿರುದ್ಧ ಈಗಾಗಲೇ ದೇಶದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪರಿಶಿಷ್ಟ ಜಾತಿ ಪಗಂಡಗಳ ಜನರಿಗೆ ನ್ಯಾಯ ಸಿಗಬೇಕಾಗಿದೆ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು. ದಸಂಸ ಜಿಲ್ಲಾ ಸಂಚಾಲಕರುಗಳಾದ ಸತೀಶ್, ರಜನಿ ಮತ್ತು ಶಿವಕುಮಾರ್ ಉಪಸ್ಥಿತರಿದ್ದರು.