ಮಡಿಕೇರಿ, ಏ.5 : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ತಾ. 8 ರಂದು ಸಂತೋಷಕೂಟವನ್ನು ಕಾಲೇಜಿನಲ್ಲಿ ಏರ್ಪಡಿಸಲಾಗಿದೆಯೆಂದು ಸಂಘದ ಅಧ್ಯಕ್ಷೆ ಶೋಭಾ ಸುಬ್ಬಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ಕಾಲೇಜು ಆವರಣದಲ್ಲಿ ನಡೆಯುವ ಸಂತೋಷಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಬ್ರಿಗೇಡಿಯರ್ ಪಿ.ಟಿ. ಮೊಣ್ಣಪ್ಪ ವಿಎಸ್‍ಎಂ ಮತ್ತು ಸೀತಾಲಕ್ಷ್ಮಿ ಅಪ್ಪಯ್ಯ ಪಾಲ್ಗೊಳ್ಳಲಿ ದ್ದಾರೆ ಎಂದು ತಿಳಿಸಿದರು.

ಸಂತೋಷಕೂಟದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಹಲವು ಕಾರ್ಯಕ್ರಮಗಳನ್ನು ಈಗಾಗಲೇ ಆಯೋಜಿಸಲಾಗಿದ್ದು, ದೇಶ ಪ್ರೇಮ, ಶುಚಿತ್ವ, ಕಸ ವಿಲೇವಾರಿ ಮುಂತಾದ ವಿಷಯಗಳ ಕುರಿತು ಭಾಷಣ, ಪ್ರಬಂಧ ಸ್ಪರ್ಧೆಯನ್ನು ಸಂಘದ ವತಿಯಿಂದ ನಡೆಸಲಾಗಿದೆ. ಮುಖ್ಯಮಂತ್ರಿಗಳು ಮಡಿಕೇರಿಗೆ ಆಗಮಿಸಿದ್ದ ಸಂದರ್ಭದ ವರದಿಯನ್ನು ಕಾಲೇಜು ವಿದ್ಯಾರ್ಥಿಗಳಿಂದ ಮಾಡಿಸುವ ಮೂಲಕ ಮಕ್ಕಳ ತಿಳುವಳಿಕೆಯನ್ನು ಪರೀಕ್ಷಿಸುವ ಸ್ಪರ್ಧೆಯನ್ನು ಪ್ರೆಸ್ ಕ್ಲಬ್ ಸಹಯೋಗ ದೊಂದಿಗೆ ನಡೆಸಿರುವ ದಾಗಿ ತಿಳಿಸಿದರು.

ಪೊನ್ನಂಪೇಟೆ ಅರಣ್ಯ ಕಾಲೇಜಿನ ಡೀನ್ ಆಗಿರುವ ಡಾಕ್ಟರ್ ಕುಶಾಲಪ್ಪ ಅವರ ಮೂಲಕ ಅರಣ್ಯದ ಅಳಿವು, ಉಳಿವು ಹಾಗೂ ಕೊಡಗಿನ ಉದ್ಯೋಗಾವಕಾಶ ಹಾಗೂ ಇಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳೊಡನೆ ಸಂವಾದದ ಸರಣಿ ಕಾರ್ಯಕ್ರಮ ನಡೆಸಿರುವದಾಗಿ ತಿಳಿಸಿದರು.

ಕಾಲೇಜಿನ ಆವರಣದ ಖಾಲಿ ಇರುವ ಜಾಗದಲ್ಲಿ ಪರಿಸರ ಸ್ನೇಹಿ ಗಿಡಗಳನ್ನು ನೆಡುವದರ ಮೂಲಕ ಮರವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು, ಕಾಲೇಜಿಗೆ ಕಟ್ಟಡದ ಅವಶ್ಯಕತೆ ಇದ್ದುದರಿಂದ ಸಂಘದ ವತಿಯಿಂದ ಒಂದು ತರಗತಿಯನ್ನು ಕಟ್ಟಲು ಎಲ್ಲಾ ಸಿದ್ಧತೆಗಳು ನಡೆದಿರುವದಾಗಿ ಶೋಭಾ ಹೇಳಿದರು.

ಕಾಲೇಜಿನ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಅವರ ಪ್ರೋತ್ಸಾಹ ಮತ್ತು ಸಲಹೆಗಳೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಕೊಂಡು ಬರಲಾಗುತ್ತಿದೆ. ಆದರೆ, ಕಾಲೇಜು ಬಿಟ್ಟ ನಂತರ ವಿದ್ಯಾರ್ಥಿಗಳಲ್ಲಿ ಹಳೇ ವಿದ್ಯಾರ್ಥಿ ಸಂಘಕ್ಕೆ ಸೇರುವ ಆಸಕ್ತಿ ಕಡಿಮೆಯಾಗುತ್ತಿರುವದು ವಿಷಾದನೀಯ ಎಂದರು.

ಸಂತೋಷಕೂಟದಂದು ಹಳೇ ವಿದ್ಯಾರ್ಥಿ ಸಂಘಕ್ಕೆ ಸದಸ್ಯತ್ವವನ್ನು ಪಡೆದುಕೊಳ್ಳುವವರಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದ ಅವರು, ಯುವಪೀಳಿಗೆ ಇದರ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುವ ಮೂಲಕ ಕಾಲೇಜಿಗೆ ಗುರುದಕ್ಷಿಣೆ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಸಾಕಷ್ಟು ಹಿಂದಿನ ಹಳೆಯ ವಿದ್ಯಾರ್ಥಿಗಳೊಂದಿಗೆ ಪ್ರಸ್ತುತ ವಿದ್ಯಾರ್ಥಿಗಳು ಸದಸ್ಯತ್ವವನ್ನು ಪಡೆದುಕೊಳ್ಳುವಂತೆ ಶೋಭಾ ಸುಬ್ಬಯ್ಯ ವಿನಂತಿಸಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎನ್.ಎ. ಅಪ್ಪಯ್ಯ, ಕಾರ್ಯದರ್ಶಿ ಶ್ಯಾಮ್ ಪೂಣಚ್ಚ, ಸದಸ್ಯರಾದ ತಾರಾ ಮುದ್ದಯ್ಯ, ಎನ್.ಡಿ. ಚರ್ಮಣ್ಣ ಉಪಸ್ಥಿತರಿದ್ದರು.