ಮಡಿಕೇರಿ, ಏ. 6: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ತೃತೀಯ ವರ್ಷದ ವಿದ್ಯಾರ್ಥಿಗಳು ನಿರ್ಮಾಣ ಮಾಡಿದ್ದ ‘ಮಂಗಳ ಮುಖಿಯರು’ ಮತ್ತು ‘ಕಾಡು ಕುರುಬರು’ ಕುರಿತ ಕಿರು ಸಾಕ್ಷ್ಯಚಿತ್ರ ಪ್ರದರ್ಶನ ಕಾರ್ಯಕ್ರಮ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ನಡೆಯಿತು.
ಸಾಕ್ಷ್ಯಚಿತ್ರವನ್ನು ಪತ್ರಕರ್ತ ವಿಘ್ನೇಶ್ ಎಂ. ಭೂತನಕಾಡು ಬಿಡುಗಡೆ ಮಾಡಿದರು. ಇದೇ ಸಂದರ್ಭ ಸಮಾಜಶಾಸ್ತ್ರ ವಿಭಾಗದ ‘ವಿ’ ಚಿತ್ರ ಸಮಾಜ ಪ್ರಸ್ತುತಿಯಲ್ಲಿ ಬಿ. ಸುರೇಶ್ ನಿರ್ದೇಶನದ ‘ಪುಟ್ಟಕ್ಕನ ಹೈವೇ’ ಚಲನಚಿತ್ರ ಪ್ರದರ್ಶನಗೊಂಡಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಪಾರ್ವತಿ ಅಪ್ಪಯ್ಯ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ರಂಗಪ್ಪ, ಸಹಾಯಕ ಪ್ರಾಧ್ಯಾಪಕಿ ಡಾ. ಗಾಯತ್ರಿ, ಉಪನ್ಯಾಸ ಪ್ರದೀಪ್ ಬಾಣೆಗದ್ದೆ, ಇಂಗ್ಲಿಷ್ ವಿಭಾಗದ ನಯನ ಕಶ್ಯಪ್, ಕನ್ನಡ ವಿಭಾಗದ ಜಯಂತಿ, ಸಮಾಜ ಕಾರ್ಯ ವಿಭಾಗದ ಮಧುಕರ್, ಪತ್ರಿಕೋದ್ಯಮ ವಿಭಾಗದ ಇಳಯರಾಜ, ದೈಹಿಕ ಶಿಕ್ಷಣ ವಿಭಾಗದ ಪಾವನ ಕೃಷ್ಣ ಮತ್ತಿತರರು ಹಾಜರಿದ್ದರು.
ಸಮಸ್ಯೆ ಬಿಂಬಿಸಿದ ವಿದ್ಯಾರ್ಥಿಗಳು: ಕಾರ್ಯಪ್ಪ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ತೃತೀಯ ವರ್ಷದ ವಿದ್ಯಾರ್ಥಿಗಳಾದ ಅಕ್ಷಯ್, ಲೋಹಿತ್, ವಿಜಯ್, ಪ್ರಸಿನ್, ಮರ್ವಿನ್ ಸ್ಯಾಮ್ಸನ್, ಶಿವಕುಮಾರ್ ‘ಮಂಗಳ ಮುಖಿಯರು’ ಮತ್ತು ‘ಕಾಡುಕುರುಬರು’ ಸಾಕ್ಷ್ಯಚಿತ್ರದ ಮೂಲಕ ಸಮಾಜದ ಸಮಸ್ಯೆಗಳನ್ನು ಬಿಂಬಿಸುವ ಕೆಲಸ ಮಾಡಿದರು. ಇಂದು ಮಂಗಳ ಮುಖಿಯರು ಸಮಾಜದಲ್ಲಿ ಅನುಭವಿಸುತ್ತಿರುವ ಸಮಸ್ಯೆ, ಶೋಷಣೆಗಳ ಬಗ್ಗೆ ಬೆಳಕು ಚೆಲ್ಲಿದರು. ಮಂಗಳಮುಖಿಯರ ಅಭಿಪ್ರಾಯ ಸಂಗ್ರಹಿಸಿ ಅವರ ಬದುಕಿನ ಚಿತ್ರಣವನ್ನು ಕಟ್ಟಿಕೊಟ್ಟರು. ಕಾಡು ಕುರುಬರು ಚಿತ್ರದಲ್ಲಿ ದುಬಾರೆ ಸಾಕಾನೆ ಶಿಬಿರದ ಮಾವುತರ ಜೀವನದಲ್ಲಿನ ಸಮಸ್ಯೆಗಳ ಮೇಲೆ ಬೆಳೆಕು ಚೆಲ್ಲುವ ಪ್ರಯತ್ನ ಮಾಡಿದರು.