ಶ್ರೀಮಂಗಲ, ಏ. 6: ಸಾಹಿತ್ಯ ಬೆಳೆದರೆ ಮಾತ್ರ ಭಾಷೆ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ವತಿಯಿಂದ ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿವಿಧ ಲೇಖಕರ ಪುಸ್ತಕವನ್ನು ಹೊರತರಲಾಗುತ್ತಿದೆ. ಇದರ ಮುಖಾಂತರ ಕೊಡವ ಭಾಷೆ, ಸಾಹಿತ್ಯ, ಸಂಸ್ಕøತಿಯನ್ನು ಉಳಿಸುವ ಕೆಲಸಕ್ಕೆ ಕೂಟ ಕಂಕಣಬದ್ಧವಾಗಿದೆ ಎಂದು ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಹೇಳಿದರು.

ಶ್ರೀ ವಗರೆ ಈಶ್ವರ ಅಯ್ಯಪ್ಪ ದೇವಸ್ಥಾನ ಸಮಿತಿ ಹಾಗೂ ಕೊಡವ ತಕ್ಕ್ ಎಳ್ತ್‍ಕಾರಡ ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ಜನಪ್ರಿಯ ಕೊಡವ ಸಾಹಿತ್ಯ ಮಾಲೆ ಯೋಜನೆಯ 153ನೇ ಪುಸ್ತಕ ಲೇಖಕಿ ಉಳುವಂಗಡ ಕಾವೇರಿ ಉದಯ ಬರೆದ ಪುಸ್ತಕ ‘ಕೊಡಗ್‍ರ ದೇವನೆಲೆ’ ಹಾಗೂ ಲೇಖಕಿ ಚೊಟ್ಟೆಯಂಡಮಾಡ ಲಲಿತಾ ಕಾರ್ಯಪ್ಪ ಅವರು ಬರೆದ ‘ಈ ಜೀವ ನೀಕಾಯಿತ್’ 154ನೇ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ವತಿಯಿಂದ ಹೊರ ಜಿಲ್ಲೆಯಲ್ಲೂ ವಿವಿಧ ಕಾರ್ಯ ಕ್ರಮಗಳನ್ನು ಹಮ್ಮಿ ಕೊಳ್ಳಲಾಗುತ್ತಿದೆ. ಕವಿ ಹಾಗೂ ಹಾಡುಗಾರ ದಿ. ಮುಲ್ಲೇರ ಜಿಮ್ಮಿ ಅಯ್ಯಪ್ಪ ಅವರ ಜ್ಞಾಪಕಾರ್ಥವಾಗಿ ವೀರಾಜಪೇಟೆ ಕೊಡವ ಸಮಾಜದಲ್ಲಿ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ಕೊಡವ ತಕ್ಕ್ ಎಳ್ತ್‍ಕಾರಡ ಕೂಟ ಒಂದು ತರಬೇತಿ ಕೇಂದ್ರವಾಗಿದ್ದು, ಇಲ್ಲಿ ಹಲವಾರು ಸಾಹಿತ್ಯ ಆಸಕ್ತರಿಗೆ ವಿವಿಧ ಕ್ಷೇತ್ರಗಳಲ್ಲಿ ತರಬೇತಿಯನ್ನು ನೀಡಿ ಕೊಡವ ಭಾಷೆ, ಸಂಸ್ಕøತಿ, ಆಚಾರ-ವಿಚಾರಗಳನ್ನು ಉಳಿಸುವ ನಿಟ್ಟಿನಲ್ಲಿ ಶ್ರದ್ಧಾಪೂರ್ವಕವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.

ಪುಸ್ತಕ ದಾನಿ ಕಟ್ಟೇರ ವಿಶ್ವನಾಥ್ ಮಾತನಾಡಿ, ಇತಿಹಾಸ ಪ್ರಸಿದ್ಧ ವಗರೆ ಶ್ರೀ ಅಯ್ಯಪ್ಪ ದೇವಸ್ಥಾನದ ಹೆಸರನ್ನು ದೇಶ ವಿದೇಶಗಳಲ್ಲಿ ನೆನಪಿಸುವಂತೆ ಈ ಊರಿನ ಇಬ್ಬರು ಲೇಖಕಿಯರು ಮಾಡುತ್ತಿದ್ದಾರೆ. ಇವರ ಪರಿಶ್ರಮಕ್ಕೆ ಬೆಲೆ ನೀಡಬೇಕಾದರೆ ಅವರು ಬರೆದಂತಹ ಪುಸ್ತಕಗಳನ್ನು ಓದುವದರ ಮೂಲಕ ನಮ್ಮಲ್ಲೂ ಸಾಹಿತ್ಯ ಆಸಕ್ತಿಯನ್ನು ಬೆಳೆಸಬೇಕಾಗಿದೆ ಎಂದರು.

ಮತ್ತೊಬ್ಬ ದಾನಿ ನ್ಯಾಷನಲ್ ಅಕಾಡೆಮಿ ಶಾಲೆಯ ಅಧ್ಯಕ್ಷೆ ಅಪ್ಪನೆರವಂಡ ಶಾಂತಿ ಅಚ್ಚಪ್ಪ ಮಾತನಾಡಿ, ಕೊಡವ ಸಾಂಸ್ಕøತಿಕ ಸಾಹಿತ್ಯ ಮತ್ತಷ್ಟು ಎತ್ತರಕ್ಕೆ ಏರಬೇಕಾಗಿದೆ. ಭಾಷೆ, ಸಂಸ್ಕøತಿ, ಸಾಹಿತ್ಯ ಪ್ರತಿಯೊಬ್ಬರಿಗೂ ಮುಟ್ಟಬೇಕಾಗಿದೆ. ಇದರೊಂದಿಗೆ ಮುಂದಿನ ತಲೆಮಾರಿಗೂ ವಿಶಿಷ್ಟ ಸಂಸ್ಕøತಿ ಹಸ್ತಾಂತರವಾಗಬೇಕಾಗಿದೆ. ಪ್ರತಿಯೊಬ್ಬರು ಸಾಹಿತ್ಯ ಸಂಸ್ಕøತಿಯನ್ನು ಬೆಳೆಸಬೇಕಾಗಿದೆ ಎಂದು ತಿಳಿಸಿದರು.

ಮುಖ್ಯ ಅಥಿತಿಗಳಾಗಿ ಶ್ರೀ ವಗರೆ ಅಯ್ಯಪ್ಪ ದೇವಸ್ಥಾನ ಸಮಿತಿಯ ಅಧ್ಯಕ್ಷ ಕಟ್ಟೇರ ಈಶ್ವರ, ತಕ್ಕಮುಖ್ಯಸ್ಥ ಕಟ್ಟೇರ ಅಚ್ಚಪ್ಪ, ದೇವಸ್ಥಾನ ಸಮಿತಿಯ ಪ್ರಮುಖರಾದ ಉಳುವಂಗಡ ದಿನೇಶ್, ಕಟ್ಟೇರ ಉತ್ತಪ್ಪ, ಕಾರ್ಯದರ್ಶಿ ಗಣೇಶ್, ಹಾಗೂ ಊರಿನ ಹಿರಿಯರಾದ ಉಳುವಂಗಡ ಸುಬ್ಬಯ್ಯ, ಚಟ್ಟಂಡ ಸೋಮಯ್ಯ, ಕಟ್ಟೇರ ಭೀಮಯ್ಯ, ದಾನಿಗಳಾದ ಕೈಬಿಲೀರ ಪಾರ್ವತಿ, ಮುಂತಾದವರು ಉಪಸ್ಥಿತರಿದ್ದರು.