ಸೋಮವಾರಪೇಟೆ, ಏ. 6: ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ಮತದಾರರ ಉತ್ಸವ ಜಾಗೃತಿ ಅಭಿಯಾನ ಕಾರ್ಯಕ್ರಮ ಪಟ್ಟಣದಲ್ಲಿ ನಡೆಯಿತು. ‘ನಮ್ಮ ವಾಗ್ದಾನ-ಪ್ರತಿಶತ ಮತದಾನ’ ಘೋಷ ವಾಕ್ಯದಡಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜಾಥಾದಲ್ಲಿ ಭಾಗವಹಿಸಿದ್ದರು.
ಪಟ್ಟಣ ಪಂಚಾಯಿತಿಯಿಂದ ಹೊರಟ ಮೆರವಣಿಗೆ ನಗರದ ಪ್ರಮುಖ ಮಾರ್ಗದಲ್ಲಿ ಸಂಚರಿಸಿತು. ನಮ್ಮ ಮತ ನಮ್ಮ ಹಕ್ಕು, ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ತಪ್ಪದೇ ಮತದಾನ ಮಾಡಿ,ಮತದಾನ ನಮ್ಮೆಲ್ಲರ ಹಕ್ಕು-ತಪ್ಪದೇ ಚಲಾಯಿಸಿ, ಜನತಂತ್ರದ ನಿರ್ಮಾಣಕ್ಕೆ ಮತದಾನ ಮಾಡಿ, ನಿಮ್ಮ ಆಯ್ಕೆ ಸೂಕ್ತವಾಗಿರಲಿ, ಯೋಚಿಸಿ ಮತ ಚಲಾಯಿಸಿ ಎಂಬ ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭ ಮಾತನಾಡಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ, ಸಂವಿಧಾನದತ್ತವಾಗಿ ಪ್ರಾಪ್ತವಾಗಿರುವ ಮತದಾನದ ಹಕ್ಕನ್ನು ಎಲ್ಲರೂ ಚಲಾಯಿಸಬೇಕು. 18 ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಬೇಕು. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.
ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ಉದಯಕುಮಾರ್, ಸಿಬ್ಬಂದಿಗಳಾದ ರಫೀಕ್, ಡಿಸೋಜ, ರೂಪಾ, ಶ್ವೇತಾ, ಹನುಮ, ಅಂಗನವಾಡಿ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು.