ಕಂದಾಯ ಇಲಾಖೆ ವಿರುದ್ಧ ಅಸಮಾಧಾನ

ಮಡಿಕೇರಿ, ಏ. 6: ‘ಸರ್ಕಾರಿ ಕೆಲಸ ದೇವರ ಕೆಲಸ’ ಎನ್ನುವ ಮಾತು ತನ್ನೆಲ್ಲ ಅರ್ಥವನ್ನು ಕಳೆದುಕೊಂಡು ಅಪಹಾಸ್ಯಕ್ಕೆ ಎಡೆಮಾಡಿಕೊಡುವ ವಾಕ್ಯವಾಗಿ ಪರಿಣಮಿಸಿರುವದಕ್ಕೆ ದ್ಯೋತಕವೆಂಬಂತೆ, ಜಾಗವೊಂದರ ದಾಖಲೆಗಳನ್ನು ಸರಿಪಡಿಸಿಕೊಳ್ಳುವ ವೃದ್ಧರೊಬ್ಬರ 16 ವರ್ಷಗಳ ನಿರಂತರ ಪ್ರಯತ್ನ ಇನ್ನೂ ಫಲಪ್ರದವಾಗದೆ ಉಳಿದು ಹೋಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಮಡಿಕೇರಿ ತಾಲೂಕಿನ ಕಾರುಗುಂದ ಗ್ರಾಮದ ನಿವಾಸಿ, 38 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಎಸ್‍ಐ ಆಗಿ ಕಾರ್ಯನಿರ್ವಹಿಸಿ, ನಿವೃತ್ತ ಜೀವನವನ್ನು ನೆಮ್ಮದಿಯಿಂದ ಕಳೆÉಯಬೇಕಿದ್ದ ಅಜ್ಜೇಟಿರ ಎ. ದೇವಯ್ಯ ತಮ್ಮ ಈ 72ನೇ ವಯಸ್ಸಿನಲ್ಲೂ ತಮ್ಮ ಜಾಗದ ದಾಖಲೆಗಳು ಕಂದಾಯ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದ ಆಗದಿರುವದಕ್ಕೆ ಹತಾಶರಾಗಿದ್ದಾರೆ, ‘ಇನ್ನು ಮುಂದೆ ನಾನು ಕಂದಾಯ ಇಲಾಖೆಗೆ ತೆರಳುವದಿಲ್ಲ’ವೆಂದು ಸುದೀರ್ಘ ಪ್ರಯತ್ನಗಳ ಬಳಿಕ ಕೈಚೆಲ್ಲಿ ಕುಳಿತಿದ್ದಾರೆ.

ಕಾರುಗುಂದ ಗ್ರಾಮದ ಕುಳ ನಂ.6ರ ಸರ್ವೇ ನಂ. 143/1 ರಲ್ಲಿ ಅಜ್ಜೇಟಿರ ದೇವಯ್ಯ ಅವರ ಅನುಭವ ಸ್ವಾಧೀನದಲ್ಲಿ 1.50 ಏಕರೆ ಜಮ್ಮಾ ಜಾಗವಿದೆ. ಇದರ ಸರ್ವೆ ಕಾರ್ಯ ನಡೆಸಿ, ಕಂದಾಯ ನಿಗದಿಪಡಿಸಿ ಆರ್‍ಟಿಸಿ ಮಾಡಿಸಿಕೊಡುವಂತೆ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿ, ತಿಂಗಳಿಗೆ ಕನಿಷ್ಟ ಎರಡು ಬಾರಿಯಂತೆ ಮಡಿಕೇರಿಯ ಕಂದಾಯ ಇಲಾಖೆಗೆ ಕಳೆÉದ ಹದಿನಾರು ವರ್ಷಗಳಿಂದ ಅಲೆದರೂ ಇವರ ಪುಟ್ಟ ಕೆಲಸ ಇಲ್ಲಿಯವರೆಗೆ ನಡೆಯದಿರುವದು, ಒಟ್ಟು ಆಡಳಿತ ವ್ಯವಸ್ಥೆ ಜನಸಾಮಾನ್ಯರನ್ನು ಎಷ್ಟರಮಟ್ಟಿಗೆ ಕಡೆಗಣಿಸುತ್ತದೆ ಎನ್ನುವದಕ್ಕೊಂದು ಸಣ್ಣ ಉದಾಹರಣೆ.

ಸುದ್ದಿಗೋಷ್ಠಿಯಲ್ಲಿ ತಮ್ಮ ನೋವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡ ಅಜ್ಜೇಟಿರ ದೇವಯ್ಯ, ಇಲ್ಲಿಯವರೆಗೆ ಕಂದಾಯ ಇಲಾಖೆಯೊಂದಿಗೆ ಕೆಲಸ ಮಾಡಿಕೊಳ್ಳಲು ನಡೆಸಿರುವ ಹೋರಾಟವನ್ನು ವಿವರಿಸಿದ ಅಜ್ಜೇಟಿರ ದೇವಯ್ಯ, ತಮ್ಮ ಜಾಗಕ್ಕೆ ಆರ್‍ಟಿಸಿ ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ಕಂದಾಯ ಇಲಾಖೆಗೆ ಸಲ್ಲಿಸಿದ ಅರ್ಜಿಯ ಹಿಂದೆ ಬಿದ್ದ ತಾನು ಜಾಗದ ಸರ್ವೇ ಕಾರ್ಯ ನಡೆಸಿದ್ದು, ತನ್ನ ಜಾಗವನ್ನು 143/ಬಿ ಮತ್ತು 143/7 ಎಂದು ಗುರುತಿಸಿಕೊಂಡು, ಈ ಜಾಗಕ್ಕೆ ಕುಟುಂಬಸ್ಥರ ಆಕ್ಷೇಪಗಳಿಲ್ಲವೆಂದು ನ್ಯಾಯಾಲಯದಿಂದ ಪ್ರಮಾಣಪತ್ರವನ್ನು ಪಡೆದು ದಾಖಲಾತಿಗಳನ್ನು ಕಂದಾಯ ಇಲಾಖೆಗೆ ಒದಗಿಸಿದ್ದೆ. ಬಳಿಕ ದುರಸ್ತಿ ಸರ್ವೆ ಕಾರ್ಯವೂ ನಡೆದು, ಜಾಗದಲ್ಲಿನ ಕಾಲು ದಾರಿಯ ಸರ್ವೇ ನಡೆಯಬೇಕೆಂದು ಹೇಳಿದಾಗ ಅದನ್ನೂ ನಡೆಸಿಯಾಗಿತ್ತು. ಇವೆಲ್ಲ ಆಗುವಷ್ಟರಲ್ಲಿ ಕಂದಾಯ ಇಲಾಖೆ ‘ತಾಂತ್ರಿಕ ತೊಂದರೆ’ಯ ಕಾರಣವನ್ನು ಒಡ್ಡಿ, ಕಡತವನ್ನು ಡಿಡಿಎಲ್‍ಆರ್, ಎಡಿಎಲ್‍ಆರ್ ಕಚೇರಿಗೆ ಅನಗತ್ಯವಾಗಿ ಕಳುಹಿಸುತ್ತಲೆ ಇದ್ದರಾದರೆ, ಇದರ ಹಿಂದೆ ತಾನು ಓಡಾಡಿ ಓಡಾಡಿ ಬಳಲಿರುವದಾಗಿ ನೊಂದು ನುಡಿದರು.

ತನ್ನ ಕೆಲಸವಾಗದೆ ಬೇಸತ್ತು ಅಂದಿನ ಉಸ್ತುವಾರಿ ಸಚಿವರಾಗಿದ್ದ ಜಾರ್ಜ್ ಅವರಿಗೆ ಮನವಿ ಸಲ್ಲಿಸಿದ್ದೆ. ಅವರು ಅಂದಿನ ತಹಶೀಲ್ದಾರ್‍ರಿಗೆ ಕೆಲಸ ಮಾಡಿಕೊಡಲು ಸೂಚನೆ ನೀಡಿದರೂ ಪ್ರಯೋಜನವಾಗಿಲ್ಲ ಎಂದು ದೇವಯ್ಯ ಅಳಲು ತೋಡಿಕೊಂಡರು.

ಗೋಷ್ಠಿಯಲ್ಲಿ ಎಸ್.ಬಿ. ಗಣಪತಿ ಉಪಸ್ಥಿತರಿದ್ದರು.