ಮಡಿಕೇರಿ, ಏ. 6: ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 3ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ 7ನೇ ಹೊಸಕೋಟೆ ಗ್ರಾಮದ ಅಂದಗೋವೆ ಪೈಸಾರಿಯಲ್ಲಿ ಆರೋಪಿ ಪ್ರಸಾದ್ ಬಿ. ಎಂಬಾತ 2016ರ ಜುಲೈ ತಿಂಗಳಿನಲ್ಲಿ ಕಿವಿಕೇಳದ, ಮಾತುಬಾರದ ಯುವತಿಯೋರ್ವಳ ಮೇಲೆ ಬಲಾತ್ಕಾರವಾಗಿ ಅತ್ಯಾಚಾರವೆಸಗಿದ್ದ. ಪರಿಣಾಮ ಆ ಯುವತಿ ತಾ. 18.4.2017 ರಂದು ಜಿಲ್ಲಾಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣ ವಿಚಾರಣೆ ನಡೆಸಿದ್ದ 3ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಪವನೇಶ್ ಅವರು ಆರೋಪಿಗೆ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ. ಆರೋಪಿ ಬಲಾತ್ಕಾರವಾಗಿ ಅತ್ಯಾಚಾರ ಎಸಗಿದ ಅಪರಾಧಕ್ಕಾಗಿ 10 ವರ್ಷಗಳ ಕಠಿಣ ಸಜೆ ಮತ್ತು ರೂ. 7500 ದಂಡವನ್ನು ವಿಧಿಸಿದ್ದಾರೆ. ಅಮಾಯಕಳ ಒಪ್ಪಿಗೆ ಇಲ್ಲದೇ ಆಕೆಯ ದೈಹಿಕ ಅಸಮರ್ಥತೆಯನ್ನು ದುರುಪಯೋಗ ಮಾಡಿಕೊಂಡು ಆಕೆಯ ಮೇಲೆ ಬಲಾತ್ಕಾರವಾಗಿ ಅತ್ಯಾಚಾರ ಮಾಡಿ, ಆಕೆಯು ಗರ್ಭಿಣಿಯಾಗುವಂತೆ ಮಾಡಿದ ಅಪರಾಧಕ್ಕಾಗಿ 10 ವರ್ಷಗಳ ಕಠಿಣ ಸಜೆ ಮತ್ತು ರೂ. 7500 ದಂಡವನ್ನು ವಿಧಿಸಿದ್ದು, ವಸೂಲಾತಿಯಾಗುವ ದಂಡದ ಹಣದಲ್ಲಿ ರೂ. 12,500 ಯುವತಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದ್ದಾರೆ. ಸಜೆಯನ್ನು ಏಕಕಾಲದಲ್ಲಿ ಅನುಭವಿಸುವಂತೆ ಸೂಚಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಎಂ. ಕೃಷ್ಣವೇಣಿ ವಾದ ಮಂಡಿಸಿದರು.