ಗೋಣಿಕೊಪ್ಪ, ಏ. 6: ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆಯ ವಾರ್ಷಿಕ ಮಹೋತ್ಸವ ಕಾನನ ಕಲರವ-2018 ವಿಜೃಂಭಣೆಯಿಂದ ಜರುಗಿತು.ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಸಿ ಜಿ ಕುಶಾಲಪ್ಪ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಸಚಿವ ಹಾಗೂ ಶಿಕ್ಷಣ ನಿರ್ದೇಶಕ ಡಾ. ಪಿ ನಾರಾಯಣಸ್ವಾಮಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಟಾಟಾ ಸಂಸ್ಥೆಯ ವ್ಯವಸ್ಥಾಪಕ ಎಂ. ಬಿ. ಗಣಪತಿ ಪಾಲ್ಗೊಂಡಿದ್ದರು.

ಸಹಾಯಕ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಡಾ. ಎಂ. ಜಡೆಗೌಡ ಕಾಲೇಜಿನ ಶೈಕ್ಷಣಿಕ, ವಿಸ್ತರಣಾ ಮತ್ತು ಸಂಶೋಧನಾ ಚಟುವಟಿಕೆಗಳ ವರದಿಯನ್ನು ಮಂಡಿಸಿದರು. ಮುಖ್ಯ ಅತಿಥಿ ಎಂ.ಬಿ. ಗಣಪತಿಯವರು ವಿವಿಧ ಕ್ಷೇತ್ರಗಳಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸುತ್ತಾ ಶಿಸ್ತು ಬದ್ಧ ನಡವಳಿಕೆ ಮತ್ತು ದೂರದೃಷ್ಟಿ ವಿದ್ಯಾರ್ಥಿಗಳ ಸಾಧನೆ ಉನ್ನತ ಮಟ್ಟಕ್ಕೆ ಏರಲು ಸಹಾಯಕವಾಗುತ್ತದೆ ಎಂದು ಹೇಳಿದರು.

ವಿಶ್ವವಿದ್ಯಾಲಯದ ಕುಲಸಚಿವ ಡಾ. ಪಿ ನಾರಾಯಣಸ್ವಾಮಿಯವರು ನೀತಿಕತೆಗಳ ಮುಖಾಂತರ ವಿದ್ಯಾರ್ಥಿಗಳಲ್ಲಿ ಶಿಸ್ತು ಪಾಲನೆಯ ಮಹತ್ವವನ್ನು ಸಾರಿ ಹೇಳಿದರು. ಪದವಿ ಪಡೆದು ಹೊರ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಅವರು, ಪೋಷಕರು, ಸಮಾಜ ಮತ್ತು ಅಧ್ಯಾಪಕ ವೃಂದ ನಿಮ್ಮ ಮೇಲೆ ಇರಿಸಿಕೊಂಡಿರುವ ಭರವಸೆಗಳನ್ನು ಈಡೇರಿಸುವಂತಾಗಲಿ ಎಂದು ಹಾರೈಸಿದರು. ಈ ವರ್ಷದ ಅತ್ಯುತ್ತಮ ಹೊರಹೋಗುತ್ತಿರುವ ವಿದ್ಯಾರ್ಥಿನಿ ಕನ್ನಡ ಕುಸುಮ, ಅತ್ಯುತ್ತಮ ಪ್ರತಿಭಾವಂತ ವಿದ್ಯಾರ್ಥಿ ಚಂದನ್, ಅತ್ಯುತ್ತಮ ಕ್ರೀಡಾಳು ಪ್ರಶಸ್ತಿಯನ್ನು ಹಸ್ತಾ ಶೆಟ್ಟಿ ಪಡೆದುಕೊಂಡರು.

ಅಧ್ಯಕ್ಷೀಯ ಭಾಷಣ ಮಾಡಿದ ಕಾಲೇಜಿನ ಡೀನ್ ಡಾ. ಸಿ ಜಿ ಕುಶಾಲಪ್ಪ ಅವರು ವಿಶ್ವವಿದ್ಯಾಲಯ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಶೈಕ್ಷಣಿಕ, ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸಿ ಬರಲಿರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಗೈಯ್ಯುವ ಮಾರ್ಗೊಪಾಯಗಳನ್ನು ಜಾರಿಗೊಳಿಸುತ್ತಿರುವದಾಗಿ ಹೇಳಿದರು.

ವಿದ್ಯಾರ್ಥಿ ಬಿಪಿನ್ ಕುಮಾರ್ ಸ್ವಾಗತಿಸಿದರೆ, ವಂದನಾರ್ಪಣೆಯನ್ನು ವಿದ್ಯಾರ್ಥಿನಿ ರಾಜೇಶ್ವರಿ ವiತ್ತು ನಿರೂಪಣೆಯನ್ನು ವಿದ್ಯಾರ್ಥಿಗಳಾದ ಮುಹಮ್ಮದ್ ಜೀಶಾನ್ ಮತ್ತು ಹಸ್ತಾ ಶೆಟ್ಟಿ ನಡೆಸಿಕೊಟ್ಟರು. ನಂತರ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ನೃತ್ಯ, ನಾಟಕ ಇತರ ಮನೋರಂಜನಾ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು.