ಗುಡ್ಡೆಹೊಸೂರು, ಏ. 6: ಇಲ್ಲಿಗೆ ಸಮೀಪದ ಆನೆಕಾಡು ಆನೆ ಶಿಬಿರದಲ್ಲಿ ಒಟ್ಟು 8 ಮಂದಿ ಆನೆ ಮಾವುತರು ಮತ್ತು 12 ಮಂದಿ ಆನೆ ಕಾವಾಡಿಗಳು ಅನೇಕ ವರ್ಷಗಳಿಂದ ನೆಲಸಿದ್ದು, ಅವರ ಬದುಕು ಆದಿ ಮಾನವರ ಕಾಲವನ್ನು ನೆನಪಿಸುವಂತಿದೆ. ಪ್ಲಾಸ್ಟಿಕ್ ಹೊದಿಕೆಯ ಗುಡಿಸಲೆ ಅವರ ಅರಮನೆಗಳು. ಆನೆಗಳನ್ನು ಕಾಯಲು, ಆನೆ ಪಳಗಿಸಲು, ಪ್ರವಾಸಿ ತಾಣಗಳಲ್ಲಿ ಆನೆ ಸವಾರಿ ಮಾಡಿ ಸರಕಾರದ ಖಜಾನೆ ತುಂಬಿಸಲು ಕಾವಾಡಿಗರು ಬೇಕು. ಆದರೆ ಅವರಿಗೆ ಬದುಕಲು ಒಂದು ಸೂರೇ ಇಲ್ಲ. ಅರಣ್ಯ ಇಲಾಖಾ ವತಿಯಿಂದ ವರ್ಷ ವರ್ಷ ಕೋಟಿಗಟ್ಟಲೆ ಕಾಮಗಾರಿಯನ್ನು ನಡೆಸಲÁಗುತ್ತದೆ. ಒಂದು ಕಾಡಾನೆಯನ್ನು ಹಿಡಿಯಲು ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಲಾಗುತ್ತದೆ. ಆದರೆ ಕಾಡಿನಲ್ಲಿರುವ ಇಲಾಖಾ ಸಿಬ್ಬಂದಿಗಳಿಗೆ ವ್ಯವಸ್ಥಿತವಾದ ಮನೆಗಳನ್ನು ಕಟ್ಟಿಕೊಡಲು ಯಾಕೆ ಪ್ರಯತ್ನಿಸುತ್ತಿಲ್ಲ ಎಂಬದೆ ಪ್ರಶ್ನೆಯಾಗಿದೆ. ಮೈಸೂರು ದಸರಾ ಬಂದರೆ ಇವರಿಗೆ ರಾಜ ಮರ್ಯಾದೆ, ಎರಡು ತಿಂಗಳು ಮಾತ್ರ ಸರಕಾರದಿಂದ ಎಲ್ಲಾ ಸೌಲಭ್ಯ! ನಂತರದ ದಿನಗಳಲ್ಲಿ ಇವರಿಗೆ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲುಗಳೆ ಗತಿ! ಜಿಲ್ಲಾಧಿಕಾರಿಗಳು ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಇದರ ಬಗ್ಗೆ ಗಂಭೀರ ಚಿಂತನೆ ಮಾಡಿ ಇವರ ಬಾಳು ಬೆಳಗುವಂತೆ ಮಾಡಬೇಕಿದೆ.

ಆನೆ ಮಾವುತರಿಗೆ ಬದುಕಲು ಯೋಗ್ಯವಾದ ಮನೆಗಳನ್ನು ಜಿಲ್ಲಾಡಳಿತದ ವತಿಯಿಂದ ನಿರ್ಮಿಸಿಕೊಡಬೇಕು ಎಂದು ಗಿರಿಜನ ಮಖಂಡ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ಕೆ. ಚಂದ್ರ ಒತ್ತಾಯಿಸಿದ್ದಾರೆ. ಕಬ್ಬಿನ ಗದ್ದೆ ಮತ್ತು ದುಬಾರೆ ಗಿರಿಜನ ಹಾಡಿಯ ಬಹಳ ಮಂದಿ ರ್ಯಾಫ್ಟಿಂಗ್ ಉದ್ದಿಮೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ನಮ್ಮ ಕುರುಬ ಜನಾಂಗದ ನೂರಾರು ಮಂದಿ ಯುವಕರು ಇದೀಗ ಬೀದಿಗೆ ಬಿದ್ದಿದ್ದಾರೆ. ಜಿಲ್ಲಾಧಿಕಾರಿಗಳು ರ್ಯಾಫ್ಪಿಂಗ್ ಉದ್ದಿಮೆಯನ್ನು ಸ್ಥಗಿತ ಗೊಳಿಸಿರುವದೆ ಇದಕ್ಕೆ ಕಾರಣ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. - ಗಣೇಶ್