ಕೂಡಿಗೆ, ಏ. 6: ಕೊಡಗು ಜಿಲ್ಲೆಯಲ್ಲಿ ಹೆಚ್ಚು ಶ್ರೀಗಂಧದ ಮರಗಳನ್ನು ಹೊಂದಿರುವ ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ ಸಮೀಪದ ಗ್ರಾಮಗಳು ಮತ್ತು ತೊರೆನೂರು ಗ್ರಾ.ಪಂ.ನ ಅಳುವಾರ, ಸಿದ್ದಲಿಂಗಪುರ ವ್ಯಾಪ್ತಿಯಲ್ಲಿ ನೈಸರ್ಗಿಕವಾಗಿ ಬೆಳೆದು ನಿಂತಿರುವ ಶ್ರೀಗಂಧದ ಗಿಡಗಳ ರಕ್ಷಣೆ ಅತಿ ಮುಖ್ಯವಾಗಿದೆ.

ಶ್ರೀಗಂಧದ ಮರಗಳ ಬೆಳವಣಿಗೆಗೆ ಬೇಕಾಗುವಂತಹ ಕಲ್ಲು ಮಿಶ್ರಿತ ಕೆಂಪು ಮಣ್ಣು ಹಾಗೂ ಜರಿ ಮಣ್ಣಿನ ಬೆಟ್ಟಗಳು ಇರುವ ಈ ವ್ಯಾಪ್ತಿಗಳಲ್ಲಿ ಪುರಾತನ ಕಾಲದಿಂದಲೂ ಸಾವಿರಾರು ಶ್ರೀಗಂಧದ ಮರಗಳು ಬೆಳೆಯುತ್ತಿವೆ. ಗಿಡಗಳು ಬೆಳೆದು ಸಣ್ಣಮಟ್ಟದ ಬೆಳವಣಿಗೆ ತಲಪಿದಾಗ ಗಿಡಗಳು ಕಳ್ಳರ ಪಾಲಾಗುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ಈ ವ್ಯಾಪ್ತಿಯ ಸಾರ್ವಜನಿಕರು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದು ಶ್ರೀಗಂಧದ ಮರಗಳನ್ನು ಸಂರಕ್ಷಿಸಲು ಪತ್ರ ವ್ಯವಹಾರ ಮಾಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇದರತ್ತ ಗಮನಹರಿಸದೆ, ಬೆಳೆದು ನಿಂತಿರುವ ಶ್ರೀಗಂಧದ ಮರಗಳು ಕಳ್ಳರ ಪಾಲÁಗುತ್ತಿದೆ.

ಗಿಡ ಸಂರಕ್ಷಣೆ ಮತ್ತು ಕೃಷಿಗೆ ಸಂಬಂಧಿಸಿದಂತೆ ವಿವಿಧ ಜಿಲ್ಲೆಗಳಲ್ಲಿ ತರಬೇತಿ ಹೊಂದುತ್ತಿರುವ ವಿದ್ಯಾರ್ಥಿಗಳ ತಂಡವೊಂದು ಕೊಡಗಿನ ಶ್ರೀಗಂಧ ಮರಗಳ ವೀಕ್ಷಣೆಗೆ ಅಳುವಾರದತ್ತ ಬಂದು ಬೆಳೆದು ನಿಂತ ಶ್ರೀಗಂಧ ಮರಗಳನ್ನು ವೀಕ್ಷಣೆ ಮಾಡುವದರ ಬದಲು ಚಿಕ್ಕ ಚಿಕ್ಕ ಗಿಡಗಳನ್ನು ಮರಗಳ್ಳರು ಕಡಿದು ನಾಶ ಪಡಿಸಿರುವದನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿಗಳು, ಕೊಡಗಿನ ಶ್ರೀಗಂಧ ಮರಗಳು ನೈಸರ್ಗಿಕವಾಗಿ ಬೆಳೆದು ನಿಂತಿರುವುದರಿಂದ ಇವುಗಳ ರಕ್ಷಣೆ ಮಾಡುವದರಿಂದ ಸರಕಾರಕ್ಕೆ ಅಧಿಕ ಆದಾಯ ಬರುತ್ತದೆ. ನಶಿಸಿ ಹೋಗುತ್ತಿರುವ ಶ್ರೀಗಂಧ ಮರ ಮತ್ತು ಅದರ ಉತ್ಪನ್ನಗಳು ಮುಂದಿನ ಪೀಳಿಗೆಗೆ ಉಳಿಸುವ ಕೆಲಸವಾಗಬೇಕು ಎಂದರು.

ಅರಣ್ಯ ಇಲಾಖೆಯವರು ಅಳುವಾರದಲ್ಲಿ ಅರಣ್ಯ ರಕ್ಷಕ ತರಬೇತಿ ಪ್ರಾರಂಭ ಮಾಡಿದಲ್ಲಿ, ಶ್ರೀಗಂಧ ಮರಗಳು ಕಳ್ಳರ ಪಾಲಾಗುವದನ್ನು ತಡೆಯಬಹುದು.

ಶೀಘ್ರವಾಗಿ ಮರಗಳ ರಕ್ಷಣೆಯಲ್ಲಿ ತೊಡಗಲು ಕುಶಾಲನಗರದ ಗಂಧದಕೋಟೆಯಲ್ಲಿರುವ ಅರಣ್ಯ ರಕ್ಷಕ ತರಬೇತಿ ಕೇಂದ್ರದ ಘಟಕವನ್ನು ಅಳುವಾರ ಸಮೀಪದ ಬೈರಪ್ಪನಗುಡಿ ಹಾಗೂ ಸಿದ್ಧಲಿಂಗಪುರ ವ್ಯಾಪ್ತಿಗಳಲ್ಲಿ ಪ್ರಾರಂಭಿಸಬೇಕೆಂದು ಈ ವ್ಯಾಪ್ತಿಯ ಸಾರ್ವಜನಿಕರ ಆಗ್ರಹವಾಗಿದೆ.

- ಕೆ.ಕೆ. ನಾಗರಾಜ ಶೆಟ್ಟಿ.