ಮಡಿಕೇರಿ ಏ.6 :ಕೊಡಗಿನ ಎಲ್ಲಾ ಹಿಡುವಳಿದಾರರ ಜಮ್ಮಾ ಮತ್ತು ಬಾಣೆ ಜಮೀನಿಗೆ 2013ರ ರಾಷ್ಟ್ರಪತಿಗಳ ಅಂಗೀಕಾರದ ಅನ್ವಯ ಕಂದಾಯ ನಿಗದಿ ಮಾಡಬೇಕೆಂದು ಒತ್ತಾಯಿಸಿ ರುವ ಸೇವ್ ಕೊಡಗು ವೇದಿಕೆಯ ಪ್ರಮುಖರು, ಭೂ ಹಿಡುವಳಿದಾರರ ಸಮಸ್ಯೆಗಳಿಗೆ ಸ್ಪಂದಿಸುವ ರಾಜಕಾರಣಿ ಗಳಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲ ಸೂಚಿಸುವಂತೆ ಕರೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಪ್ರಮುಖ ಮಧು ಬೋಪಣ್ಣ, 2013 ರಲ್ಲಿ ಅಂಗೀಕಾರ ವಾದ ಕಾಯ್ದೆಯನ್ನು ಜಾರಿಗೆ ತಂದು ಕಂದಾಯ ನಿಗದಿ ಮಾಡದೆ ಇರುವದಕ್ಕೆ ಭ್ರಷ್ಟ ಕಂದಾಯ ಅಧಿಕಾರಿಗಳು ಹಾಗೂ ಪರಿಸರವಾದಿಗಳೇ ನೇರ ಕಾರಣವೆಂದು ಆರೋಪಿಸಿದರು.

ಜಮ್ಮಾಬಾಣೆಗೆ ಸಂಬಂಧಿಸಿದಂತೆ ಹೊಸ ಕಾಯ್ದೆ ಜಾರಿಗೆ ಬಂದ ನಂತರ ಹಳೆಯದನ್ನು ಉಲ್ಲೇಖಿಸುವ ಅಗತ್ಯವಿಲ್ಲ. ಆದರೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರಾಷ್ಟ್ರಪತಿಗಳ ಅಂಕಿತಕ್ಕೆ ಬೆಲೆ ಇಲ್ಲದಂತೆ ಮಾಡಿದ್ದಾರೆ. ಈ ಚುನಾವಣೆಯ ಸಂದರ್ಭದಲ್ಲಿ ಹಿಡುವಳಿದಾರರು ಜಾಗೃತಗೊಂಡು ಬಾಣೆ ಜಮೀನಿಗೆ ಕಂದಾಯ ನಿಗದಿ ಮಾಡುವ ಕಾಳಜಿ ತೋರುವ ರಾಜಕಾರಣಿಗಳನ್ನು ಬೆಂಬಲಿಸುವದು ಸೂಕ್ತವೆಂದು ಅಭಿಪ್ರಾಯಪಟ್ಟರು.

2000ನೇ ಇಸವಿಯಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಹೊರಡಿಸಿದ ಸುತ್ತೋಲೆÀ ಪ್ರಕಾರ ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳು ಹೊಂದಿರುವ ಜಮೀನುಗಳನ್ನು ಹೊರತು ಪಡಿಸಿದಂತೆ ಸಾಗುವಳಿಗೆ ಒಳಪಟ್ಟ ಎಲ್ಲಾ ನಿಬಂಧನೆಯ ಜಮೀನನ್ನು ಪರಭಾರೆ ಮಾಡ ಬಹುದಾಗಿದೆ. ಖಾತಾ ಬದಲಾವಣೆ ಮಾಡುವ ಮುನ್ನ ಸಾಗುವಳಿ ಮಾಡಿದ ಬಾಣೆ ಜಮೀನುಗಳಿಗೆ ಕಂದಾಯ ನಿಗದಿಪಡಿಸಬಹುದಾಗಿದೆ. ದೇವರ ಕಾಡು, ಊರು ಮಂದ್, ಊರುಡುವೆ ಅರಣ್ಯ ಖಾತೆಗೆ ಒಳಪಟ್ಟಿರುತ್ತದೆ. ಕೂರ್ಗ್ ಆರ್.ಆರ್. ನಿಯಮಗಳು ರದ್ದುಗೊಂಡಿರುತ್ತದೆ. ಕರ್ನಾಟಕ ಭೂ ಕಂದಾಯ ನಿಯಮ 1964 ಮತ್ತು ಅದರಂತೆ ರಚಿಸಿದ ಭೂ ಮಂಜೂರಾತಿ ನಿಯಮಗಳನ್ನು ಅನುಸರಿಸ ಬಹುದಾಗಿದೆ. ಕಂದಾಯಕ್ಕೆ ಬಾರದ ಬಾಣೆ ಜಮೀನುಗಳಿಗೆ ಮುಂದಿನ ಆದೇಶ ಬರುವವರೆಗೆ ಮಿತಿಗೊಳಿಸಿದ ಹಕ್ಕುಗಳು ಮುಂದುವರಿಯುತ್ತವೆ. ಭೂ ದಾಖಲೆಯಾದ ಪಹಣಿ ಪದ್ಧತಿಯನ್ನು ತಕ್ಷಣ ಜಾರಿಗೆ ತರಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು. ಆದರೆ, ಇಲ್ಲಿಯವರೆಗೆ ಈ ನಿಯಮಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಇದಕ್ಕೆ ಪರಿಸರವಾದಿಗಳ ಕೈವಾಡವೆ ಕಾರಣವೆಂದು ಮಧುಬೋಪಣ್ಣ ಆರೋಪಿಸಿದರು.

ಈ ಅಂಶಗಳ ಅನುಷ್ಠಾನಕ್ಕಾಗಿ ಹೋರಾಟಗಳು ನಡೆಯುತ್ತಿದ್ದ ಸಂದರ್ಭ ಅಂದಿನ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಮ್‍ದಾರ್ ಅವರು ಆದೇಶವೊಂದನ್ನು ಹೊರಡಿಸಿ, ಜಮ್ಮಾ ಮತ್ತು ಬಾಣೆ ಜಮೀನು ಹೊಂದಿರುವ ವರು ಅದರ ಒಡೆಯರಾಗಲು ಸಾಧ್ಯವಿಲ್ಲವೆಂದು ಸೂಚಿಸಿದ್ದರು. ಬಾಣೆ ಜಮೀನು ಜಾನುವಾರುಗಳ ಮೇವಿಗಾಗಿ, ಮರಗಳು ಎಲೆ ಗೊಬ್ಬರವನ್ನು ತೆಗೆಯಲು, ಕೃಷಿ ಮತ್ತು ಗೃಹೋಪಯೋಗಕ್ಕಾಗಿ ಕಟ್ಟಿಗೆ ಮತ್ತು ಮರಮುಟ್ಟುಗಳನ್ನು ಪಡೆಯಲು ಅವಕಾಶವಿದೆÉ. ಆದರೆ ಮರ ಅಥವಾ ಬಾಣೆ ಜಮೀನನ್ನು ಮಾರಾಟ ಮಾಡಲು ಹಕ್ಕು ಇರುವದಿಲ್ಲವೆಂದು ಆದೇಶದಲ್ಲಿ ತಿಳಿಸಿದ್ದರು.

ಈ ಸುತ್ತೋಲೆಗೆ ಪರಿಸರವಾದಿಗಳೆ ಕಾರಣವೆಂದು ಆರೋಪಿಸಿದ ಅವರು, ಸಾವಿರಾರು ವರ್ಷಗಳ ಹಿಂದೆ ಕೊಡಗಿನ ಮೂಲ ನಿವಾಸಿಗಳು, ಪೂರ್ವಜರು ಗದ್ದೆ ಕಡಂಗ, ತೋಡುಗಳನ್ನು ಅತ್ಯಂತ ಪರಿಶ್ರಮದಿಂದ ಯಾಂತ್ರಿಕ ಪರಿಕರಗಳ ಸಹಾಯವಿಲ್ಲದೆ ನಿರ್ವಹಣೆ ಮಾಡಿದ್ದಾರೆ. ಸಾವಿರಾರು ವರ್ಷಗಳಿಂದ ಈ ಭೂಮಿಯ ಒಡೆತನವನ್ನು ಹೊಂದಿರುವ ಮೂಲ ನಿವಾಸಿಗಳಿಗೆ ಕಂದಾಯ ಇಲಾಖೆÉಯ ಭ್ರಷ್ಟ ಅಧಿಕಾರಿಗಳು ಹಾಗೂ ಪರಿಸರ ವಾದಿಗಳಿಂದ ತೊಂದರೆಯಾಗುತ್ತಿದ್ದ ಸಂದರ್ಭ ಅಂದು ವಿಧಾನಸಭೆಯ ಸ್ಪೀಕರ್ ಆಗಿದ್ದ ಕೆ.ಜಿ.ಬೋಪಯ್ಯ ಅವರು, ಹಿಡುವಳಿದಾರರ ಪರ ಹೋರಾಡಿದರು. ಇದರ ಫಲವಾಗಿ ವಿಧಾನಸಭೆÉಯಲ್ಲಿ ಜಮ್ಮಾಬಾಣೆಗೆ ಕಂದಾಯ ನಿಗದಿಗೆ ಕಾನೂನು ರೂಪುಗೊಂಡು ರಾಷ್ಟ್ರಪತಿಗಳಿಂದ ಅನುಮೋದನೆ ದೊರೆತಿತ್ತು. ಕರ್ನಾಟಕ ರಾಜ್ಯ ಪತ್ರದಲ್ಲಿ 2013 ಫೆಬ್ರವರಿ 1 ರಂದು ಪ್ರಕಟಗೊಂಡ ತಿದ್ದುಪಡಿಯಂತೆ ಕೊಡಗಿನ ಎಲ್ಲಾ ಬಾಣೆ ಜಾಗದ ಒಡೆತನ ಹಿಡುವಳಿದಾರರದ್ದೇ ಆಗಿದೆ. ಈ ಬಾಣೆ ಜಮೀನÀನ್ನು ಹಿಡುವಳಿ ದಾರರ ಹೆಸರಿನಲ್ಲಿ ಕಂದಾಯದ ವ್ಯಾಪ್ತಿಗೆ ತರುವದು ಸರ್ಕಾರಿ ಅಧಿಕಾರಿಗಳ ಕರ್ತವ್ಯವಾಗಿದೆ. ಆದರೆ, ಅಧಿಕಾರಿಗಳು ಹಿಡುವಳಿದಾರರ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಮತ್ತು ಅಕ್ರಮ ರೆಸಾರ್ಟ್‍ಗಳಿಗೆ ಅವಕಾಶ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಹಿಡುವಳಿದಾರರಿಗೆ ನ್ಯಾಯ ಸಿಗಬೇಕಾದರೆ, ಕಂದಾಯ ಇಲಾಖೆ ಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಯಬೇಕಾದರೆ ಮತ್ತು ಪರಿಸರ ವಾದಿಗಳಿಂದ ಮುಕ್ತಿ ಸಿಗಬೇಕಾದರೆ, ಒಗ್ಗಟ್ಟಿನ ಹೋರಾಟದ ಅಗತ್ಯ ವಿದೆಯೆಂದು ಅವರು ಅಭಿಪ್ರಾಯ ಪಟ್ಟರು. ಹಣಬಲ, ಒತ್ತಡ, ಹನಿ ಟ್ರ್ಯಾಪ್ ಹಾಗೂ ಎನ್‍ಜಿಒಗಳ ಸಂಪರ್ಕವನ್ನು ಪ್ರಯೋಗಿಸಿ ಬಾಣೆ ಜಮೀನಿಗೆ ಕಂದಾಯ ನಿಗದಿ ಯಾಗದಂತೆ ನೋಡಿಕೊಳ್ಳುತ್ತಿದ್ದಾರೆ ಮತ್ತು ತಾವು ನೈಜ ಪರಿಸರವಾದಿಗಳಂತೆ ನಟಿಸುತ್ತಿದ್ದಾರೆ ಎಂದು ಮಧು ಬೋಪಣ್ಣ ಆರೋಪಿಸಿದರು. ಜಿಲ್ಲೆಯ ಜನ ಎಚ್ಚೆತ್ತುಕೊಂಡು ಚುನಾವಣೆ ಸಂದರ್ಭದಲ್ಲಾದರೂ ಜಾಗೃತರಾಗಿ ಭೂ ಹಿಡುವಳಿದಾರರ ಪರವಾಗಿರುವ ರಾಜಕಾರಣಿಗಳನ್ನು ಬೆಂಬಲಿಸುವಂತೆ ಕರೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಬಿ.ಟಿ.ದಿನೇಶ್, ಉದಯಶಂಕರ್ ಹಾಗೂ ಜಿನ್ನು ನಾಣಯ್ಯ ಉಪಸ್ಥಿತರಿದ್ದರು.