ವೀರಾಜಪೇಟೆ, ಏ. 6: ಕ್ರೀಡಾಕೂಟಗಳು ಸಮಾಜದಲ್ಲಿ ವರ್ಗಗಳ ನಡುವೆ ಜಾತಿ, ಧರ್ಮಗಳ ನಡುವೆ ಪ್ರೀತಿ ವಿಶ್ವಾಸವನ್ನು ಬೆಸೆಯುವ ಉತ್ತಮ ಸಾಧನವಾಗಿದೆ. ಸಂಘಟನೆಗಳು ಸ್ಥಳೀಯವಾಗಿ ಆಯೋಜಿಸುವ ಪಂದ್ಯಾಟಗಳಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಎಲೆ ಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸಲು ಅವಕಾಶವಾಗಲಿದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ನಿನ ಅಧ್ಯಕ್ಷ ಡಿ.ಎಚ್. ಸೂಫಿ ಹೇಳಿದರು.

ಕೊಡಗು ಜಿಲ್ಲಾ ಮುಸ್ಲಿಂ ಸ್ಪೋಟ್ರ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಇಲ್ಲಿನ ತಾಲೂಕು ಮೈದಾನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಚೆಂಡು ಎಸೆದು ಉದ್ಘಾಟಿಸಿದ ಅವರು ಸಮಾಜದಲ್ಲಿ ಸುವ್ಯವಸ್ಥೆಯ ಶಾಂತಿ, ನೆಮ್ಮದಿ, ಸೌಹಾರ್ದತೆ ಕಾಪಾಡಲು ಇಂತಹ ಪಂದ್ಯಾಟಗಳು ಸಹಕಾರಿಯಾಗಲಿವೆ ಎಂದರು.

ಸಂಘಟನೆಯ ಮಾಜಿ ಅಧ್ಯಕ್ಷ ಪಿ.ಎಂ ಕುಂಞಅಬ್ದುಲ್ಲಾ ಮಾತನಾಡಿ, ಸಂಘಟನೆಗಳು ಆಯೋಜಿಸುವ ಪಂದ್ಯಾಟಗಳು ಸೌಹಾರ್ದತೆಯ ಪ್ರತೀಕ. ಮುಸ್ಲಿಂ ಸಂಘಟನೆ ಕಳೆದ 9ವರ್ಷಗಳಿಂದ ಆಯೋಜಿಸಿದ ವಾಲಿಬಾಲ್ ಪಂದ್ಯಾಟದಿಂದ ಆಯ್ದ ಯುವ ಪ್ರತಿಭೆಗಳು ರಾಷ್ಟ್ರೀಯ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ನೀಡುತ್ತಿರುವದು ಸಂಘಟನೆಗೆ ಮೆರುಗನ್ನು ನೀಡಿದೆ ಎಂದು ಹೇಳಿದರು. ಸಂಘಟನೆಯ ಅಧ್ಯಕ್ಷ ಪಿ.ಎ.ಹನೀಫ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಬೆಂಗಳೂರಿನ ಉದ್ಯಮಿ ಎಡಪಾಲ ಹರೀಶ್, ಕಡಂಗದ ಕರೀಮ್, ಕಬೀರ್, ಜುಬೇರ್, ಪವಾಜ್, ಮಕ್ಕಿ ನಾಸೀರ್, ಬಲ್ಲಚಂಡ ಗೌತಮ್, ಎಂ.ವೈ. ಆಲಿ, ನಾಪೋಕ್ಲಿನ ಮನ್ಸೂರ್ ಆಲಿ ಮತ್ತಿತರರು ಉಪಸ್ಥಿತರಿದ್ದರು.

ಸಂಘಟನೆಯ ಪದಾಧಿಕಾರಿಗಳು ನಿರ್ದೇಶಕರುಗಳು ಹಾಜರಿದ್ದರು.

ಕಾರ್ಯದರ್ಶಿ ಎಂ.ಎಂ. ಇಸ್ಮಾಯಿಲ್ ಸ್ವಾಗತಿಸಿದರು. ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವು ತಾ. 8ರವರೆಗೆ ನಡೆಯಲಿದ್ದು ಅದೇ ದಿನ ರಾತ್ರಿ 7 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ.