ಗೋಣಿಕೊಪ್ಪಲು, ಏ. 6: ದ.ಕೊಡಗಿನ ವಿವಿಧ ಭಾಗದಲ್ಲಿ ಕಳೆದ ಎರಡು ತಿಂಗಳಿನಿಂದ ಹುಲಿ ಹಾವಳಿ ಮಿತಿಮೀರಿದ್ದು, ಇಲಾಖೆಯ ನಿರ್ಲಕ್ಷ್ಯತನದಿಂದ ರೈತನ ಜಾನುವಾರುಗಳು ಬಲಿಯಾಗು ತ್ತಿರುವದನ್ನು ಖಂಡಿಸಿ ಜಾತ್ಯತೀತ ಜನತಾದಳದ ಕೊಡಗು ಜಿಲ್ಲಾ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಅವರ ಮುಂದಾಳತ್ವದಲ್ಲಿ ತಿತಿಮತಿ ಅರಣ್ಯ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರದ ವಿರುದ್ಧ ಹಾಗೂ ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟಿಸಲಾಯಿತು.

ನಿರಂತರವಾಗಿ ರೈತನ, ಬೆಳೆಗಾರನ ಜಾನುವಾರುಗಳನ್ನು ಹುಲಿ ತಿಂದು ಹಾಕುತ್ತಿದ್ದರೂ ಇಲ್ಲಿಯ ತನಕ ಹುಲಿಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ರೈತರಿಗೆ ಆಧಾರವಾಗಿದ್ದ ಜಾನುವಾರುಗಳನ್ನು ಹುಲಿ ತಿಂದು ಹಾಕಿರುವದರಿಂದ ಸರ್ಕಾರ ನೀಡುತ್ತಿರುವ 10 ಸಾವಿರ ಪರಿಹಾರ ಏನೇನು ಸಾಲದಾಗಿದೆ. ಹುಲಿಯನ್ನು ಹಿಡಿಯುವಲ್ಲಿ ಅಧಿಕಾರಿಗಳು ನೂತನ ತಂತ್ರಜ್ಞಾನವನ್ನು ಅಳವಡಿಸುತ್ತಿಲ್ಲ. ವಾರದೊಳಗೆ ವ್ಯಾಘ್ರನ ಸೆರೆಯಾಗದಿದ್ದಲ್ಲಿ ಪ್ರತಿಭಟನೆ ನಡೆಸಿ ಅರಣ್ಯ ಇಲಾಖಾ ಕಚೇರಿಗೆ ಮುತ್ತಿಗೆ ಹಾಕಲಾಗುವದೆಂದು ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಹೇಳಿದರು. ಪ್ರತಿಭಟನೆಯ ವಿಷಯ ತಿಳಿಸಿದ್ದರೂ ತಿತಿಮತಿ ಅರಣ್ಯ ಅಧಿಕಾರಿ ಶ್ರೀಪತಿ ಅವರು ಸ್ಥಳದಲ್ಲಿ ಹಾಜರಿರದ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದರು. ಆರ್.ಎಫ್.ಓ. ಅಶೋಕ್ ಹುನಗುಂದ ಪ್ರತಿಭಟನಾಕಾರರ ಆಕ್ರೋಶಕ್ಕೆ ತುತ್ತಾದರು. ಮೇಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಆದಷ್ಟು ಬೇಗನೆ ಹುಲಿಯನ್ನು ಸೆರೆ ಹಿಡಿಯುವದಾಗಿ ಅಶೋಕ್ ಭರವಸೆ ನೀಡಿದರು. ಮನವಿ ಪತ್ರವನ್ನು ಗೋಣಿಕೊಪ್ಪ ವೃತ್ತ ನಿರೀಕ್ಷಕ ಹರಿಶ್ಚಂದ್ರ ಅವರ ಮೂಲಕ ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಿಗೆ ಕಳುಹಿಸಿ ಕೊಡಲಾಯಿತು. ಪೊಲೀಸರು ಮುಂಜಾಗೃತಾ ಕ್ರಮವಾಗಿ ಅರಣ್ಯ ಕಚೇರಿ ಮುಂಭಾಗ ಬ್ಯಾರಿಕ್ಯಾಡ್ ಅಳವಡಿಸಿ ಪ್ರತಿಭಟನಕಾರರನ್ನು ಅರಣ್ಯ ಕಚೇರಿ ಒಳ ಪ್ರವೇಶಿಸದಂತೆ ಎಚ್ಚರ ವಹಿಸಿದ್ದರು.

ಪ್ರತಿಭಟನೆಯಲ್ಲಿ ಜೆ.ಡಿ.ಎಸ್.ನ ಕ್ಷೇತ್ರ ಅಧ್ಯಕ್ಷ ಎಂ. ಹೆಚ್. ಮತೀನ್, ಬಾಳೆಲೆ ಹೋಬಳಿ ಅಧ್ಯಕ ಗಾಡಂಗಡ ಸುಜು ಮೊಣ್ಣಪ್ಪ, ಜಿಲ್ಲಾ ಕೃಷಿ ಘಟಕದ ಅಧ್ಯಕ್ಷ ಮಚ್ಚಮಾಡ ಮಾಚಯ್ಯ, ಯುವ ಜೆ.ಡಿ.ಎಸ್. ಅಧ್ಯಕ್ಷ ಅಮ್ಮಂಡ ವಿವೇಕ್, ಮುಖಂಡರಾದ ಮಾಚಂಗಡ ಸುಬ್ಬಯ್ಯ, ಎಂ.ಜೆ. ಅಪ್ಪಣ್ಣ, ಅಡ್ಡೇಂಗಡ ಸುಬ್ಬಯ್ಯ, ಅಳಮೇಂಗಡ ಸತೀಶ್ ಕಾರ್ಯಪ್ಪ, ಮಾಪಂಗಡ ಮುದ್ದಯ್ಯ, ಅಕ್ಬರ್ ಪಾಷ, ಮಲ್ಚಿರ ದೇವಯ್ಯ, ಬಿ.ಎಸ್. ಶಶಿ, ಸಿ.ಎಸ್. ಮೊಣ್ಣಪ್ಪ, ರಘು, ಜ್ಯೋತಿ ಬಿ.ಎಸ್. ವೀರಾಜಪೇಟೆಯ ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಈಗಾಗಲೇ ದ. ಕೊಡಗಿನಲ್ಲಿ ಫೆ.8 ರಿಂದ ಇಲ್ಲಿಯ ತನಕ 14 ಜಾನುವಾರುಗಳು ಹುಲಿಯಿಂದ ಸಾವಿಗೀಡಾಗಿವೆ. ಇವುಗಳಲ್ಲಿ ಕಿರುಗೂರು ಗ್ರಾಮದ ಕೆ.ಯು. ಪೂವಮ್ಮ ಎಂಬವರ 1 ಹಸು, ಧನುಗಾಲ ಗ್ರಾಮದ ಮುರುಗೇಶ್ ಎಂಬವರ 3 ಹಸುಗಳು, ಕೊಟ್ಟಗೇರಿಯ ಶಿವನಂಜಯ್ಯ ಎಂಬವರ 1 ಹಸು, ಬಲ್ಯಮುಂಡೂರು ಗ್ರಾಮದ ಡಿ.ಕೆ. ಪೊನ್ನಪ್ಪ ಎಂಬವರ 1 ಕರು, ಬೀರುಗ ಗ್ರಾಮದ ಗಣೇಶ್ ದೇವಯ್ಯ ಎಂಬವರ 1 ಹಸು, ನಲ್ಲೂರು ಗ್ರಾಮದ ಬೋಸ್ ಎಂಬವರ ತೋಟದಲ್ಲಿ 1 ಹಸು, ನಲ್ಲೂರು ಗ್ರಾಮದ ಚೆಪ್ಪುಡೀರ ಉತ್ತಪ್ಪ ಎಂಬವರ 1 ಹಸು, ನಲ್ಲೂರು ಗ್ರಾಮದ ಟಿ.ಎಂ. ಜಿತೇಂದ್ರ ಎಂಬವರ 1 ಹಸು, ವೆಸ್ಟ್‍ನೆಮ್ಮಲೆ ಗ್ರಾಮದ ರಾಜು ಎಂಬವರ 2 ಹಸು, ಮಾಲ್ದಾರೆಯ ಶಂಕರಪ್ಪ ಎಂಬವರ 1 ಹಸು, ಕಲ್ತೋಡು ಗ್ರಾಮದ ಮುದ್ದುರಾಜ್ ಎಂಬವರ 1 ಕರು, ಕೊಟ್ಟಗೇರಿಯ ಮಾಪಂಗಡ ಮುದ್ದಯ್ಯನವರ 1 ಹಸುವನ್ನು ಬಲಿ ತೆಗೆದುಕೊಂಡಿದೆ.