ಹೆಬ್ಬಾಲೆ, ಏ. 6 : ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಅಳುವಾರ ಗ್ರಾಮದ ಗ್ರಾಮ ದೇವತೆ ಶ್ರೀ ಅಳುವಾರದಮ್ಮ(ಚೌಡೇಶ್ವರಿ) ದೇವಿಯ ವಾರ್ಷಿಕ ಪೂಜಾ ಮಹೋತ್ಸವ ಶುಕ್ರವಾರ ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಚಿಕ್ಕಅಳುವಾರ ಶ್ರೀ ಅಳುವಾರದಮ್ಮ ದೇವಾಲಯ ಸಮಿತಿ ವತಿಯಿಂದ ಚೈತ್ರ ಕೃಷ್ಣ ಪಕ್ಷ ಚತುರ್ಥಿ ಅನುರಾಧ ನಕ್ಷತ್ರದಂದು ಶುಭಗಳಿಗೆಯಲ್ಲಿ ದೇವಿಯ ಮೂಲ ಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಗಳು ನೆರವೇರಿಸಲಾಯಿತು.

ದೇವಸ್ಥಾನದ ಪ್ರಧಾನ ಅರ್ಚಕ ಚಂದ್ರಣ್ಣ ನೇತೃತ್ವದಲ್ಲಿ ಬೆಳಿಗ್ಗೆ 8 ಗಂಟೆಗೆ ದೇವರ ವಿಗ್ರಹಗಳಿಗೆ ಗಂಗೆಸ್ನಾನ ಮಾಡಿಸಿ ಗಂಗೆಪೂಜೆ ನೆರವೇರಿಸಿ ವಾದ್ಯಗೋಷ್ಠಿಗೊಂದಿಗೆ ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ದೇವರ ವಿಗ್ರಹಗಳನ್ನು ಹೊತ್ತ ಪುರುಷರು ಹಾಗೂ ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಸಾಗಿದರು. ನಂತರ ದೇವಿಯ ಬನದಲ್ಲಿ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ದೇವರ ವಿಗ್ರಹಗಳಿಗೆ ವಿವಿಧ ಬಗೆಯ ಪುಷ್ಪಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ಟಿ.ಎಚ್. ಪುಟ್ಟಸ್ವಾಮಿ ಹಾಗೂ ಕಾರ್ಯದರ್ಶಿ ಎ.ಎಚ್.ಶಿವಶಂಕರ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ನೆರವೇರಿಸಿ ನೆರೆದಿದ್ದ ಭಕ್ತರಿಗೆ ತೀರ್ಥಪ್ರಸಾದ ವಿತರಿಸಲಾಯಿತು.

ಈ ಸಂದರ್ಭ ತೊರೆನೂರು ಗ್ರಾ.ಪಂ.ಅಧ್ಯಕ್ಷ ಕೆ.ಬಿ. ದೇವರಾಜ್, ಸದಸ್ಯರಾದ ರೂಪಗಣೇಶ್, ಮಂಗಳಾಮಹೇಶ್, ಮಾಜಿ ಅಧ್ಯಕ್ಷ ಸಿ.ಕೆ.ಕರೀಗೌಡ, ಮಾಜಿ ಸದಸ್ಯರಾದ ಗಂಗಾಧರಪ್ಪ, ಟಿ.ಜಿ.ಶಿವಪ್ಪ, ಸಮಿತಿ ಉಪಾಧ್ಯಕ್ಷ ಎ.ಆರ್. ಮಹಾದೇವ, ಖಜಾಂಜಿ ವಿಜಯಕುಮಾರ್, ಗ್ರಾಮದ ಹಿರಿಯ ಮುಖಂಡ ಕಾಳೇಗೌಡ ಇದ್ದರು. ದೇವಸ್ಥಾನ ಸಮಿತಿ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು. ಭಕ್ತರು ದೇವಿಗೆ ಹರಕೆ ಒಪ್ಪಿಸಿದರು. ಹಬ್ಬದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ರಾತ್ರಿ 8 ಗಂಟೆಗೆ ಭದ್ರಾವತಿ ಸೋನಿ ಮೆಲೋಡಿಸ್ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.