ಕುಶಾಲನಗರ, ಏ. 6: ಮತದಾನದಲ್ಲಿ ಪಾಲ್ಗೊಳ್ಳುವದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರೊ. ಎ.ಎಂ. ಖಾನ್ ತಿಳಿಸಿದರು.

ಚಿಕ್ಕ ಅಳುವಾರದ ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರ ಹಾಗೂ ಮಂಗಳ ಅಲ್ಯುಮಿನಿ ಅಸೋಸಿಯೇಷನ್ ಸಹಯೋಗದೊಂದಿಗೆ ನಡೆದ ಮತದಾನ ಮಹತ್ವದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಜಾಪ್ರಭುತ್ವದ ನಿರ್ಮಾಣದಲ್ಲಿ ಸಮರ್ಥ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕನ ಮೇಲಿದೆ. ನಿಮ್ಮ ಮತ ನಿಮ್ಮ ಹಕ್ಕು ಯಾವದೇ ಆಸೆ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡುವಂತೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳ ಅಲ್ಯುಮಿನಿ ಅಸೋಸಿಯೇಷನ್‍ನ ಅಧ್ಯಕ್ಷ ದಿನೇಶ್‍ಕುಮಾರ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಯುವಜನತೆ ಸೇರಿದಂತೆ ದೇಶದ ಎಲ್ಲರೂ ಪ್ರಜಾಪ್ರಭುತ್ವದ ಭದ್ರ ಬುನಾದಿಗೆ ಹಾಗೂ ದೇಶದ ಸಮಗ್ರ ಅಭಿವೃದ್ಧಿಗೆ ಮತದಾನದ ಹಕ್ಕು ಚಲಾವಣೆ ಬಹುಮುಖ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಂಗಳ ಅಲ್ಯುಮಿನಿ ಅಸೋಸಿಯೇಷನ್‍ನ ಸಂಚಾಲಕ ಮಧುಸೂಧನ ಭಟ್, ಉಪಾಧ್ಯಕ್ಷ ಸದಾನಂದಶೆಟ್ಟಿ ಮಾತನಾಡಿದರು. ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಪಿ.ಎಲ್. ಧರ್ಮ ವಿಶೇಷ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ಉಪನ್ಯಾಸಕ ಜûಮೀರ್ ಅಹಮದ್ ನಿರೂಪಿಸಿದರು, ಕನ್ನಡ ಉಪನ್ಯಾಸಕ ಡಾ. ಮಹಾಂತೇಶ ಪಾಟೀಲ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಉಪನ್ಯಾಸಕರು, ಆಡಳಿತ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.