ಮಡಿಕೇರಿ, ಏ. 7: ಕಾಫಿ ನಾಡಿನಲ್ಲಿ ಉರಿಬಿಸಿಲಿನ ನಡುವೆ ಮೈ ಝಲ್ಲೆನಿಸುವ ವಾಹನ ರ್ಯಾಲಿ ಇಂದು ಪ್ರೇಕ್ಷಕರ ಗಮನ ಸೆಳೆದು, ಆಶ್ಚರ್ಯಚಕಿತಗೊಳಿಸಿತು. ಇಂದು ಅಮ್ಮತ್ತಿಯ ಕಾವಾಡಿಯಲ್ಲಿ ಆಯೋಜಿಸಿದ್ದ ಅಮ್ಮತ್ತಿ ರ್ಯಾಲಿ ಕ್ರಾಸ್ 2018 ಸೀಸನ್ 2 ವಿವಿಧ ವರ್ಗದ ಕಾರ್ ರೇಸ್ ಕ್ರೀಡಾಭಿಮಾನಿಗಳನ್ನು ರೋಮಾಂಚನಗೊಳಿಸಿತು. ಅಮ್ಮತ್ತಿ ಸಮೀಪದ ಗದ್ದೆಯಲ್ಲಿ ಆಯೋಜಿಸಿದ್ದ ಈ ರ್ಯಾಲಿಯಲ್ಲಿ. ವಿವಿಧ ವಾಹನಗಳು ಧೂಳೆಬ್ಬಿಸಿ ಓಡಿದವು. ಗದ್ದೆಯಲ್ಲಿ ಮಾಡಿದ್ದ ಅಂಕು ಡೊಂಕಿನ ಹಾದಿಯಲ್ಲಿ ಗೆಲವಿನ ಗುರಿಗೆ ನಿಗದಿತ ಸಮಯದಲ್ಲಿ .92 ಕಿ.ಮೀ. ಕ್ರಮಿಸಬೇಕಿತ್ತು.
ಈ ಸ್ಪರ್ಧೆಯನ್ನು ವಿ.ಎಸ್. ಆಫ್ ರೋಡರ್ಸ್ ಕೂರ್ಗ್ ಆಯೋಜಿಸಿದ್ದು ಇದರಲ್ಲಿ ವಿವಿಧ ವರ್ಗಗಳಿದ್ದು ಲೇಡಿಸ್ ಕ್ಲಾಸ್, 800 ಸಿ.ಸಿ, 1400 ಸಿ.ಸಿ,
(ಮೊದಲ ಪುಟದಿಂದ) 1600 ಸಿ.ಸಿ, ಕೂರ್ಗ್ ಓಪನ್, ಇಂಡಿಯಾ ಓಪನ್, ಜಿಪ್ಸಿ ಓಪನ್ ಮತ್ತು ಎಸ್ಯುವಿ ಕ್ಲಾಸ್ ವರ್ಗದಲ್ಲಿ ರ್ಯಾಲಿಯಲ್ಲಿ ಕ್ರೀಡಾ ಪಟುಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ಸ್ಪರ್ಧೆಗಾಗಿ ದಕ್ಷಿಣ ಭಾರತದ ಕೆಲವು ಕ್ರೀಡಾ ಪಟುಗಳು ಸಹ ಬಂದು ಭಾಗವಹಿಸಿದ್ದರು.
ಇಂದು ಪಂದ್ಯಾಟಕ್ಕೆ ಚಾಲನೆ ನೀಡಿದ ಸಂದರ್ಭ ಮುಖ್ಯ ಅತಿಥಿಗಳಾಗಿ, ಕ್ಯಾಪ್ಟನ್ ಪಟ್ಟಡ ಕಾರ್ಯಪ್ಪ ಅಂತರರಾಷ್ಟ್ರೀಯ ರ್ಯಾಲಿ ಪಟು ಮಾಲೇಟಿರ ಜಗತ್ ನಂಜಪ್ಪ , ಡಿ.ಎಂ.ಸಿ ಏರ್ ಪಿಲ್ಟರ್ ಸಂಸ್ಥೆ ಮಾಲೀಕÀ ಕಾಳಿಮಾಡ ಕುಶಾಲ್, ಚಾಂಪಿಯನ್ ಗ್ರೂಪ್ನ ಶುಭಕರ್ ಪಾಲ್ಗೊಂಡಿದ್ದರು.
ಈ ರ್ಯಾಲಿ ಸಂದರ್ಭ ಬೆಂಗಳೂರಿನ ರಾಜಶೇಖರ್ ಗೌಡ ಚಾಲಿಸುತ್ತಿದ್ದ ಕಾರು ಮಗುಚಿಕೊಂಡು ಹಾನಿಗೀಡಾಯಿತು. ಇದರಲ್ಲಿ ಯಾರಿಗೂ ಏನು ತೊಂದರೆ ಆಗದಿದ್ದರೂ, ಅವರ ಮಗಳಾದ ರಾಷ್ಟ್ರೀಯ ಕ್ರೀಡಾಳು ಹರ್ಷಿತ ಗೌಡ ಅವರಿಗೆ ವಾಹನ ಇಲ್ಲದೆ ತೊಂದರೆ ಆಯಿತು. ಕಳೆದ ಬಾರಿಯ ರ್ಯಾಲಿ ನಡೆಸಿದ ಜಾಗವನ್ನು ಕೈ ಬಿಟ್ಟು ಈ ಬಾರಿ ಪಕ್ಕದಲ್ಲಿಯೇ ಹೊಸ ಮಾರ್ಗ ರಚನೆಯನ್ನು ರ್ಯಾಲಿಗೆ ಮಾಡಲಾಗಿತ್ತು. ಕಳೆದ ಸಾಲಿನ ಶಾಸಕ ಮಾಲೀಕಯ್ಯ ಗುತ್ತಿಗೆದಾರ್ ಅವರ ಪುತ್ರನ ಕಾರು ಇಲ್ಲಿ ಅಪಘಾತಕ್ಕೀಡಾಗಿ, ಅಪಾಯ ದಿಂದ ಪಾರಾಗಿದ್ದರು. ಆದರೆ ಕಳೆದ ಸಾಲಿನ ಟ್ರ್ಯಾಕ್ ಸಾಕಷ್ಟು ಸವಾಲನ್ನು ಒಡ್ಡಿ ಪ್ರೇಕ್ಷಕರಿಗೆ ರ್ಯಾಲಿಯನ್ನು ಕಣ್ಣುಬಿಟ್ಟು ನೋಡುವಷ್ಟು ಕ್ರೀಡಾ ರೋಚಕತೆ ತಂದಿತ್ತು. ಕಾರುಗಳು ಹಾರಿ ಸಾಗುವಂತೆ ಹಂಪ್ಗಳನ್ನು ಮಾಡಿದ್ದು, ಕೆಳ ಮಟ್ಟದಿಂದ ಮೇಲಿನ ಮಟ್ಟಕ್ಕೆ ಸಾಗುವಂತೆ ಮಾಡಲಾಗಿತ್ತು.
ಈ ರ್ಯಾಲಿಯ ನೇತೃತ್ವವನ್ನು ಸ್ಥಳೀಯರಾದ ಚೇತನ್ ಮತ್ತು ತಿಮ್ಮಣ್ಣ ಮತ್ತು ಜಗತ್ ನಂಜಪ್ಪ ವಹಿಸಿಕೊಂಡಿದ್ದರು. 130 ರ್ಯಾಲಿ ಪಟುಗಳು ಪಾಲ್ಗೊಂಡಿದ್ದರು. ಬೆಂಗಳೂರಿನ ಎಫ್.ಆರ್.ಕೆ. ರೇಸಿಂಗ್ ತಂಡ ಪ್ರಥಮ ಪುರಸ್ಕಾರಕ್ಕೆ ಭಾಜನವಾಯಿತು. ಈ ಗುಂಪಿನ ಆರ್ಶದ್ ಪಾಷಾ ನಗದು ರೂ. 25 ಸಾವಿರ ಸಹಿತ ಟ್ರೋಫಿ ಗಳಿಸಿದರು.