ಕುಶಾಲನಗರ, ಏ. 7: ಈ ಬಾರಿಯ ಚುನಾವಣೆ ರಾಜ್ಯದ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಮಾಜಿ ಸಚಿವರು ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ಬಿ.ಎ. ಜೀವಿಜಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಶಾಲನಗರ ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬದಲಾವಣೆ ಬಯಸಿರುವ ಕರ್ನಾಟಕದ ಜನತೆ ಪ್ರ್ರಾದೇಶಿಕ ಪಕ್ಷದತ್ತ ಒಲವು ತೋರುತ್ತಿದ್ದಾರೆ. ರಾಜ್ಯದಲ್ಲಿ ಅಧಿಕಾರ ಹಿಡಿಯುವ ಮೂಲಕ ಕೇಂದ್ರ ರಾಜಕಾರಣದಲ್ಲೂ ಬದಲಾವಣೆ ತರಲು ಪಕ್ಷ ಮುಂದಾಗಲಿದೆ ಎಂದರು. ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆ ಹೊಣೆಯನ್ನು ಭಾರತೀಯ ಜನತಾ ಪಕ್ಷದ ಕೆಲವು ಪ್ರಮುಖರು ವಹಿಸಿಕೊಂಡಂತೆ ಭಾಸವಾಗುತ್ತಿದೆ ಎಂದರು.
ಈ ಸಂದರ್ಭ ಮಾತನಾಡಿದ ಜೆಡಿಎಸ್ ಪ್ರಮುಖ ಹಾಗೂ ಕುಶಾಲನಗರ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಟಿ.ಆರ್. ಶರವಣಕುಮಾರ್, ರಾಜ್ಯ ಸರಕಾರದಿಂದ ಘೋಷಣೆಯಾದ ಸಾಲಮನ್ನ ಯೋಜನೆ ಇನ್ನೂ ಅನುಷ್ಠಾನಗೊಂಡಿಲ್ಲ. ಸರಕಾರ ಕೇವಲ ಪ್ರಚಾರದಲ್ಲಿ ತೊಡಗಿದೆಯೇ ಹೊರತು ಜನತೆಯ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದರು.
ಕಾರ್ಯಕರ್ತರ ಸಭೆಯಲ್ಲಿ ಕುಶಾಲನಗರ ನಗರ ಜೆಡಿಎಸ್ ಅಧ್ಯಕ್ಷರಾಗಿ ವಿ.ಎಸ್. ಆನಂದಕುಮಾರ್ ಅವಿರೋಧವಾಗಿ ಆಯ್ಕೆಗೊಂಡರು. ಯುವ ಜನತಾದಳದ ಅಧ್ಯಕ್ಷರಾಗಿ ಮಹದೇವ್ ಅವರನ್ನು ನೇಮಿಸಲಾಯಿತು.
ಈ ಸಂದರ್ಭ ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಹೆಚ್.ಡಿ. ಚಂದ್ರು, ಕವಿತಾ, ಸುರಯ್ಯಭಾನು, ಹೋಬಳಿ ಅಧ್ಯಕ್ಷರಾದ ಎಂ.ಎಸ್. ರಾಜೇಶ್, ಮುಳ್ಳುಸೋಗೆ ಗ್ರಾ.ಪಂ. ಸದಸ್ಯರಾದ ಜಗದೀಶ್, ಜಿಲ್ಲಾ ಜೆಡಿಎಸ್ ಎಸ್ಸಿ/ಎಸ್ಟಿ ಘಟಕದ ಅಧ್ಯಕ್ಷರಾದ ಧರ್ಮರಾಜು ಇದ್ದರು.