ಮಡಿಕೇರಿ, ಏ.7 : ಮತದಾನ ಪ್ರಕ್ರಿಯೆಯಲ್ಲಿ 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬರೂ ಉತ್ಸಾಹದಿಂದ ಪಾಲ್ಗೊಳ್ಳುವಂತಾಗ ಬೇಕು ಎಂದು ಜಿಲ್ಲಾ ಚುನಾವಣಾಧಿ ಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಕರೆ ನೀಡಿದ್ದಾರೆ.ನಗರದ ಗಾಂಧಿ ಮೈದಾನದಲ್ಲಿ ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಜಾಗೃತಿ ಸಮಿತಿ ವತಿಯಿಂದ ಶನಿವಾರ ನಡೆದ ಮ್ಯಾರಥಾನ್‍ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಆಯೋಗವು ಮತದಾನದ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ಮೂಲಕ (ಸ್ವೀಪ್) ನಾನಾ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆ ನಿಟ್ಟಿನಲ್ಲಿ ವಿವಿಧ ವಯೋಮಾನದವರಿಗೆ ಓಟ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವದು ಅತ್ಯಗತ್ಯ. 18 ವರ್ಷ ಪೂರ್ಣಗೊಂಡವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುವಂತಾಗಬೇಕು. ಆ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ತಾ. 8 ರಂದು (ಇಂದು) ‘ಮಿಂಚಿನ ನೋಂದಣಿ’ ಆಭಿಯಾನ ನಡೆಯಲಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಎಲ್ಲಾ ಬೂತ್ ಮಟ್ಟದಲ್ಲಿ, ತಾಲೂಕು ತಹಶೀಲ್ದಾರರ ಕಚೇರಿ, ಉಪ ವಿಭಾಗಾಧಿಕಾರಿಯವರ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸ ಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಸ್ವೀಪ್ ಸಮಿತಿ ಸದಸ್ಯೆ ಮಂಜುಳಾ ಮಾತನಾಡಿ ಪ್ರಜಾಪ್ರಭುತ್ವ ಬಲಪಡಿಸುವ ನಿಟ್ಟಿನಲ್ಲಿ ಅರ್ಹರೆಲ್ಲರೂ ಮತದಾನ ಮಾಡುವಂತಾಗಬೇಕು ಎಂದು ತಿಳಿಸಿದರು.
ಸ್ವೀಪ್ ಸಮಿತಿ ಸದಸ್ಯ ಮಲ್ಲೇಸ್ವಾಮಿ, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‍ರಾಜ್, ಮಮ್ತಾಜ್, ದೇವರಾಜು, ಡಾ. ಆನಂದ್, ಸವಿತಾ ಇತರರು ಇದ್ದರು. ಓಟ ಸ್ಪರ್ಧೆಯು ಗಾಂಧಿ ಮೈದಾನ ದಿಂದ ಇಂದಿರಾ ಕ್ಯಾಂಟೀನ್, ಎಫ್.ಎಂ. ಕೆ.ಎಂ.ಸಿ. ಕಾಲೇಜಿನವರೆಗೆ ನಡೆಯಿತು.
ಬಳಿಕ ಜಿ.ಪಂ. ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಪ್ರಶಾಂತ್ ಕುಮಾರ್ ಮಿಶ್ರ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ನಂತರ ಮಾತನಾಡಿದ ಅವರು ಮತದಾನ ಮಾಡುವದು ಅರ್ಹರೆಲ್ಲರ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಮತದಾನ ಮಾಡುವಂತಾಗಬೇಕು ಇತರರಿಗೂ ಜಾಗೃತಿ ಮೂಡಿಸಬೇಕು ಎಂದು ಕೋರಿದರು. ಓಟ ಸ್ಪರ್ಧೆಯಲ್ಲಿ 19 ರಿಂದ 40 ವರ್ಷದೊಳಗಿನ ಮಹಿಳೆಯರು ಮತ್ತು ಪುರುಷರು, 41 ರಿಂದ 60 ವರ್ಷದೊಳಗಿನ ಮಹಿಳೆಯರು ಮತ್ತು ಪುರುಷರು, 60 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಪುರುಷರು ಉತ್ಸಾಹದಿಂದ ಪಾಲ್ಗೊಂಡು ಗಮನ ಸೆಳೆದರು.