ಹೆಬ್ಬಾಲೆ, ಏ.7: ಉತ್ತರ ಭಾರತ ಜಾರ್ಖಂಡ್ನ ರಾಂಚಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ 33ನೇ ಅಖಿಲ ಭಾರತ ಯುವ ಜನೋತ್ಸವದಲ್ಲಿ ಪಾಲ್ಗೊಂಡಿದ್ದ ಹೆಬ್ಬಾಲೆ ಗ್ರಾಮದ ನಿವಾಸಿ ಯು. ಮೇಘಾ ಭಟ್ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಕೊಡಗಿಗೆ ಕೀರ್ತಿ ತಂದಿದ್ದಾರೆ. ಗ್ರಾಮದ ನಿವಾಸಿ ಕೆಎಸ್ಆರ್ಟಿಸಿ ನೌಕರ ಕೆ.ವಿ. ಉಮೇಶ್ ಭಟ್ ಮತ್ತು ಶಿಕ್ಷಕಿ ವಾಣಿ ದಂಪತಿ ಪುತ್ರಿ ಮೇಘಾ ಭಟ್ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿದ್ದಾಳೆ.
ಯುವ ಜನೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾಲಯ ತಂಡ ಮೂರು ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದು ಸಾಧನೆ ಮಾಡಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದೆ. ಈ ತಂಡದಲ್ಲಿ ಕೊಡಗಿನ ಏಕೈಕ ವಿದ್ಯಾರ್ಥಿನಿಯಾಗಿ ಮೇಘಾ ಭಟ್ ಪಾಲ್ಗೊಂಡಿರುವದು ವಿಶೇಷವಾಗಿದೆ.
ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆ ಸುರತ್ಕಲ್ನ ಗೋವಿಂದ ದಾಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ಓದುತ್ತಿದ್ದಾಳೆ. ಅತ್ತೂರಿನ ಜ್ಞಾನಗಂಗಾ ಶಾಲೆಯಲ್ಲಿ ಪ್ರೌಢಶಾಲೆ ಮತ್ತು ಗುಡ್ಡೆಹೊಸೂರಿನ ಐಶ್ವರ್ಯ ಪಿಯು ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿರುವ ಮೇಘಾ ಬಾಲ್ಯದಿಂದಲೂ ವಿವಿಧ ಚಟುವಟಿಕೆಗಳಲ್ಲಿ ಗುರುತಿಸಿಕೊಂಡು ಹೆಸರು ಮಾಡಿದ್ದಳು. ಪಿಯುಸಿ ಓದುತ್ತಿರುವಾಗ ಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿನಿ ಎನ್ನುವ ಗೌರವಕ್ಕೂ ಪಾತ್ರರಾಗಿದ್ದಳು.
ಪ್ರತಿಭಾವಂತ ವಿದ್ಯಾರ್ಥಿನಿ ಯು. ಮೇಘಾ ಭಟ್ ಮಾತನಾಡಿ, ಆಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ತಂಡದಲ್ಲಿರುವ ಕೊಡಗಿನ ಏಕೈಕ ವಿದ್ಯಾರ್ಥಿನಿ ನಾನು ಎನ್ನುವದೇ ನನಗೆ ಹೆಮ್ಮೆಯ ಸಂಗತಿ. ಅಲ್ಲೂ ಇದೇ ಸಾಧನೆ ಮುಂದುವರಿಸುವ ವಿಶ್ವಾಸ ನನ್ನಲ್ಲಿದೆ ಎಂದು ಹೇಳಿದಳು.