ಮಡಿಕೇರಿ, ಏ. 7: ಬ್ರೇಕ್ ವಿಫಲಗೊಂಡ ಲಾರಿಯೊಂದು ಸಂಪಾಜೆ ಅರಣ್ಯ ತಪಾಸಣಾ ಗೇಟ್‍ಗೆ ಅಪ್ಪಳಿಸಿದ್ದು, ತೆರೆದುಕೊಂಡ ಗೇಟ್ ಗೇಟ್ ಪಾಲಕನಿಗೆ ಬಡಿದ ಪರಿಣಾಮ ಅವರ ಕೈ-ಕಾಲುಗಳಿಗೆ ಪೆಟ್ಟಾಗಿರುವ ಘಟನೆ ನಿನ್ನೆ ನಡೆದಿದೆ.

ನಿನ್ನೆ ಬೆಳಿಗ್ಗೆ 10.50ರ ಸಮಯದಲ್ಲಿ ಅರಣ್ಯ ಇಲಾಖೆ ಹಂಗಾಮಿ ನೌಕರ ರಾಜಪ್ಪ ಎಂಬವರು ಸಂಪಾಜೆ ಅರಣ್ಯ ತಪಾಸಣಾ ಗೇಟ್‍ನಲ್ಲಿ ಗೇಟ್ ತೆರೆಯುವ ಹಾಕುವ ಕಾಯಕದಲ್ಲಿದ್ದರು. ದಿಢೀರನೇ ಮಡಿಕೇರಿ ಕಡೆಯಿಂದ ಸಾಗಿ ಬಂದ ಲಾರಿಯೊಂದು ಗೇಟ್‍ಗೆ ಅಪ್ಪಳಿಸಿದೆ. ವೇಗವಾಗಿ ಬರುತ್ತಿದ್ದ ಲಾರಿಯನ್ನು ಗಮನಿಸಿದ ರಾಜಪ್ಪ ಅವರು, ತಾವು ನಿಂತಲ್ಲಿಂದ ಓಡಿದ್ದಾರೆ. ಅಷ್ಟರಲ್ಲಿ ಲಾರಿ ಗೇಟ್‍ಗೆ ಬಡಿದಾಗಿತ್ತು. ಲಾರಿ ಅಪ್ಪಳಿಸಿದ ರಭಸಕ್ಕೆ ಅಲ್ಲಿಂದ ಓಡುತ್ತಿದ್ದ ರಾಜಪ್ಪ ಅವರಿಗೆ ಬಡಿದಿದೆ. ರಸ್ತೆ ಬದಿ ನಿಲ್ಲಿಸಲಾಗಿದ್ದ ಇಕೋ ವಾಹನಕ್ಕೆ ಸೇರಿಸಿ ಗೇಟ್ ರಾಜಪ್ಪ ಅವರಿಗೆ ಬಡಿದು ಹಿಂದಕ್ಕೆ ಹೋಗಿ ಮತ್ತೊಮ್ಮೆ ಬಡಿದಿದೆ. ಕುಂಟುತ್ತಾ ನಾಲ್ಕು ಹೆಜ್ಜೆ ಹಾಕಿದ ರಾಜಪ್ಪ ಅಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅರಣ್ಯ, ಪೊಲೀಸ್ ಸಿಬ್ಬಂದಿಗಳು, ಸ್ಥಳೀಯರು ರಾಜಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬ್ರೇಕ್ ವಿಫಲಗೊಂಡ ಹಿನ್ನೆಲೆಯಲ್ಲಿ ಉಭಯ ಕಡೆಯವರು ಸೇರಿ ರಾಜಿ ಸಂಧಾನ ಮಾಡಿಕೊಂಡಿ ದ್ದಾರೆ. ಅವಘಡದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.